ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಚ್ಚು ನಾಯಿ ರೋಗದ ನಿಯಂತ್ರಣದ ಜೊತೆಗೆ ನಾಯಿಗಳ ಸಂತತಿ ನಿಯಂತ್ರಣವು ಅಷ್ಟೇ ಮುಖ್ಯವಾಗಿದ್ದು ಆ ನಿಟ್ಟಿನಲ್ಲಿ ಪಶು ವೈದ್ಯಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು ಗಂಗಾಧರ್ ದಿವಟರ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಸೆ.25) ಪಶು ಆಸ್ಪತ್ರೆ ಆವರಣದ ರೈತ ಭವನದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಹುಚ್ಚು ನಾಯಿ ರೋಗದ ಪ್ರಸ್ತುತ ವಿದ್ಯಮಾನಗಳು ಎಂಬುದರ ಕುರಿತಾಗಿ ಪಶುವೈದ್ಯ ಅಧಿಕಾರಿಗಳಿಗೆ ಒಂದು ದಿನದ ತಾಂತ್ರಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ರಾಜು ಕುಲೇರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸೆ.28 ರಿಂದ ಅಕ್ಟೋಬರ್ 28 ರವರೆಗೆ ನಾಯಿಗಳಿಗೆ ಉಚಿತವಾಗಿ ರೇಬಿಸ್ ರೋಗದ ವಿರುದ್ಧ ಲಸಿಕೆಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಶು ವೈದ್ಯಾಧಿಕಾರಿಗಳು ತಮ್ಮ ತಮ್ಮ ಸಿಬ್ಬಂದಿಯೊಂದಿಗೆ ಮನೆಮನೆಗೆ ತೆರಳಿ ನಾಯಿಗಳಿಗೆ ಉಚಿತ ಲಸಿಕೆ ನೀಡಿ ಹುಚ್ಚುನಾಯಿ ರೋಗ ತಡೆಗಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ಕರೆ ನೀಡಿದರು.
ಗದಗನ ಪಶು ವೈದ್ಯಕೀಯ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕರು ಡಾ.ಸಂತೋಷ್ ಸಜ್ಜನ ಅವರು ಹುಚ್ಚುನಾಯಿ ರೋಗದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪಶು ವೈದ್ಯರಿಗೆ ಹಾಗೂ ಉಪ ನಿರ್ದೇಶಕರಾಗಿ ಭಡ್ತಿ ಹೊಂದಿದ ಅಧಿಕಾರಿಗಳಿಗೆ ಸಂಘದಿಂದ ಸನ್ಮಾನಿಸಲಾಯಿತು.
ಕಾರ್ಯಗಾರದಲ್ಲಿ ವಿಜ್ಞಾನಿಗಳು ಪ್ರಾದೇಶಿಕ ರೋಗ ತನಿಕಾ ಕೇಂದ್ರದ ಹಿರಿಯ ಡಾ. ಶ್ರೀಕಾಂತ್ ಕೊವಳ್ಳಿ, ಸ್ಪೆಶಾಲಿಟಿ ಪಶು ವೈದ್ಯಕೀಯ ಆಸ್ಪತ್ರೆಯ ಉಪನಿರ್ದೇಶಕರು ಡಾ. ಶ್ರೀಧರ್ ನಾಡಗೌಡ, ಕುರಿ ಮತ್ತು ಕುರಿ ಉತ್ಪನ್ನಗಳ ಮಂಡಳಿಯ ಉಪನಿರ್ದೇಶಕರು ಡಾ.ಸುಧಾ ದೇವರೆಡ್ಡಿ, ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಧರೆಪ್ಪ ಹೊಸಮನಿ, ಕರ್ನಾಟಕ ಪಶು ವೈದ್ಯಕೀಯ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷರು ಡಾ.ವಿನಯ ಸಂಗೊಳ್ಳಿ ಮತ್ತು ಜಿಲ್ಲೆಯ ಎಲ್ಲಾ ಪಶು ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ