ಎಂ.ಕೆ.ಹೆಗಡೆ
ಗಳಿಸುವುದಕ್ಕಿಂತ ಉಳಿಸುವುದು ಉತ್ತಮ ಎಂದು ಹಿರಿಯರು ಹೇಳುತ್ತಾರೆ. 100 ರೂ. ಗಳಿಸುವುದಕ್ಕಿಂತ 10 ರೂ. ಉಳಿಸುವುದು ಸುಲಭ ಮತ್ತು ಒಳ್ಳೆಯದು. ಇಂದಿನ ದುಬಾರಿ ದುನಿಯಾದಲ್ಲಿ ನಾವು ಎಷ್ಟೇ ಗಳಿಸಿದರೂ ಖರ್ಚಾಗಿ ಹೋಗುತ್ತದೆ. ಬರುವ ಸಂಬಳದಲ್ಲಿ ಹೇಗೆ ಸಂಸಾರ ನಡೆಸುವುದು ಎನ್ನುವುದು ಬಹಳ ಜನರಿಗೆ ದೊಡ್ಡ ಚಿಂತೆಯಾಗಿದೆ.
ಆದರೆ ನಾವು ಮಾಡುವ ಖರ್ಚಿನಲ್ಲಿ ಉಳಿತಾಯ ಮಾಡಿಕೊಳ್ಳಬೇಕು ಅಥವಾ ಮಾಡಿಕೊಳ್ಳಬಹುದು ಎನ್ನುವ ಕಡೆ ಹಲವರಿಗೆ ಲಕ್ಷ್ಯವಿರುವುದಿಲ್ಲ. ಅಂದಾ ದುಂದಿ ಖರ್ಚಿನಿಂದ ಹೊರಬಂದರೆ ಪೂರ್ಣವಲ್ಲದಿದ್ದರೂ ಸ್ವಲ್ಪಮಟ್ಟಿಗಾದರೂ ನೆಮ್ಮದಿಯಾಗಿ ದುಬಾರಿ ಹೊರೆಯಿಂದ ಹೊರಬರಬಹುದು.
ಗ್ಯಾಸ್ ಬೆಲೆ 900ರ ಗಡಿ ದಾಟಿ ಎಲ್ಲರೂ ಚಿಂತೆ ಮಾಡುವಂತೆ ಮಾಡಿದೆ. ಸಾಮಾನ್ಯ ಸಂಸಾರದಲ್ಲಿ ಒಂದು ಗ್ಯಾಸ್ ಸಿಲೆಂಡರ್ ಒಂದೂವರೆ ತಿಂಗಳಿನಿಂದ ಎರಡು ತಿಂಗಳು ಬರಬಹುದು. ತಿಂಗಳಿಗೆ 500 -600 ರೂ. ಗ್ಯಾಸ್ ಬಿಲ್ ಗೆ ವ್ಯಯಿಸುವುದು ಬಹಳ ಕಷ್ಟವೇ ಸರಿ. ಹಾಗಾಗಿ ಗ್ಯಾಸ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಈ ವೆಚ್ಚವನ್ನು ಕಡಿಮೆ ಮಾಡಲು ಯೋಚಿಸುವುದು ಉತ್ತಮ.
ಈಗಿನ ಒಂದೂವರೆಯಿಂದ 2 ತಿಂಗಳು ಬರುವ ಸಿಲೆಂಡರ್ ನ್ನು 3 ತಿಂಗಳು ಬರುವಂತೆ ಮಾಡಿದರೆ ಅಷ್ಟರಮಟ್ಟಿಗೆ ಉಳಿತಾಯವಾಗುತ್ತದೆ. ಅದಕ್ಕೆ ಕೆಲವು ಟಿಪ್ಸ್ ಇಲ್ಲಿದೆ:
- ಗ್ಯಾಸ್ ಬಳಕೆಯಲ್ಲಿಲ್ಲದಿದ್ದಾಗ ರೆಗ್ಯುಲೇಟರ್ ಬಂದ್ ಮಾಡಿ ಇಡಿ. ಇದರಿಂದ ಎಲ್ಲಾದರೂ ಸಣ್ಣ ಪ್ರಮಾಣದ ಲೀಕೇಜ್ ಇದ್ದರೂ ಅದು ಉಳಿತಾಯವಾಗುತ್ತದೆ.
- ಎಲ್ಲಾದರೂ ಲೀಕೇಜ್ ಇದೆಯಾ ಎಂದು ಸರಿಯಾಗಿ ಚೆಕ್ ಮಾಡಿಸಿ. ಸಣ್ಣ ಪ್ರಮಾಣದ ಲೀಕೇಜ್ ಇದ್ದರೆ ಗೊತ್ತೇ ಆಗುವುದಿಲ್ಲ. ಇದರಿಂದ ಗ್ಯಾಸ್ ನಷ್ಟದ ಜೊತೆಗೆ ಅಪಾಯ ಕೂಡ ಆಗಬಹುದು.
- ಸ್ಟೋವ್ ನ್ನು ಸದಾ ಸುಸ್ಥಿತಿಯಲ್ಲಿಟ್ಟುಕೊಳ್ಳಿ, ಸ್ವಚ್ಛವಾಗಿಟ್ಟುಕೊಳ್ಳಿ. ಹಾಲು ಮತ್ತಿತರ ಪದಾರ್ಥಗಳು ಬಿದ್ದು ಒಳಗೆ ಕಾರ್ಬನ್ ತುಂಬುವ ಸಾಧ್ಯತೆ ಇರುತ್ತದೆ. ಸದಾ ಕ್ಲೀನ್ ಮಾಡುತ್ತಿರಿ.
- ಕೆಲವು ಮಾದರಿಯ ಬರ್ನರ್ ಹೆಚ್ಚು ಗ್ಯಾಸ್ ಬಳಸಿ, ಕಡಿಮೆ ಕಾವು ಕೊಡುತ್ತದೆ. ಈ ಬಗ್ಗೆ ತಜ್ಞರನ್ನು ಕೇಳಿ ತಿಳಿದುಕೊಳ್ಳಿ. ಸರಿಯಾದ ಬರ್ನರ್ ಇರುವ ಸ್ಟೋವ್ ಖರೀದಿಸಿ.
- ಬೆಂಕಿ ಸದಾ ನೀಲಿ ಬಣ್ಣದಲ್ಲೇ ಬರುತ್ತಿದೆಯಾ ಚೆಕ್ ಮಾಡಿಕೊಳ್ಳಿ. ಹಳದಿ ಇಲ್ಲವೇ ಕೆಂಪು ಬಣ್ಣದಲ್ಲಿದ್ದರೆ ಏನೋ ಸಮಸ್ಯೆ ಇದೆ ಎಂದೇ ಅರ್ಥ.
- ಪಾತ್ರೆಯನ್ನು ತೊಳೆದ ನಂತರ ಸರಿಯಾಗಿ ಒರೆಸಿದ ನಂತರವೇ ಒಲೆಯ ಮೇಲಿಡಿ. ಹಸಿಯಾದ ಅಥವಾ ತಳಭಾಗದಲ್ಲಿ ನೀರಿನಿಂದ ಕೂಡಿದ್ದರೆ ಗ್ಯಾಸ್ ವ್ಯರ್ಥವಾಗುತ್ತದೆ. ಮತ್ತು ಕಾರ್ಬನ್ ನಿಂದಾಗಿ ಸ್ಟೋವ್ ಕೂಡ ಬೇಗ ಕೆಡುತ್ತದೆ.
- ಸಾಧ್ಯವಾದಷ್ಟು ಅಗಲದ ಪಾತ್ರೆಗಳನ್ನು ಬಳಸಿ. ಅಗಲ ತಳವಿಲ್ಲದ ಪಾತ್ರೆಯಿಂದ ಕಾವು ಹೊರಗೆ ಹೋಗಿ ವ್ಯರ್ಥವಾಗುತ್ತದೆ.
- ಅಕ್ಕಿ ಮತ್ತು ಬೇಳೆಗಳನ್ನು ಬೇಯಿಸಲು ಇಡುವುದಕ್ಕಿಂತ ಒಂದೆರಡು ಗಂಟೆ ಮೊದಲು ನೆನೆಸಿಡಿ. ಇದರಿಂದ ಬೇಗ ಬೇಯುತ್ತದೆ. ಇಲ್ಲವಾದಲ್ಲಿ ಅದು ನೆನೆಯಲು ಸಮಯ ತೆಗೆದುಕೊಂಡು ಬೇಯುವುದು ವಿಳಂಬವಾಗುತ್ತದೆ.
- ಬೇಳೆ, ತರಕಾರಿ, ಅಕ್ಕಿ ಮೊದಲಾದವುಗಳನ್ನು ಕುಕ್ಕರ್ ನಲ್ಲೇ ಬೇಯಿಸಿ. ಮುಚ್ಚಳವಿಲ್ಲದ ಅಥವಾ ಬೇರೆ ಪಾತ್ರೆಯಲ್ಲಿ ಬೇಯಲು ಬಹಳ ಸಮಯ ಬೇಕಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಗ್ಯಾಸ್ ಅಪವ್ಯಯವಾಗುತ್ತದೆ.
- ಹಾಲನ್ನು ಕುಕ್ಕರ್ ನಲ್ಲೇ ಕಾಯಿಸಿ. ಇದರಿಂದ ಗ್ಯಾಸ್ ಉಳಿತಾಯ ಮತ್ತು ಉಕ್ಕಿ ಚೆಲ್ಲುವುದನ್ನು ಸಹ ತಡೆಯಬಹುದು.
- ಗ್ಯಾಸ್ ಹಚ್ಚಿ ಕುದಿಯಲು ಆರಂಭವಾದ ನಂತರ ಉರಿಯನ್ನು ಕಡಿಮೆ ಮಾಡಿ. ಇದರಿಂದ ಶಾಖದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ಗ್ಯಾಸ್ ಉಳಿತಾಯವಾಗುತ್ತದೆ.
- ಕೆಲವರು ಅನ್ನ ಬೇರೆ, ತರಕಾರಿ ಬೇರೆ, ಬೇಳೆ ಬೇರೆಯಾಗಿ ಬೇಯಿಸುತ್ತಾರೆ. ಮನೆಯಲ್ಲಿ 3 -4 ಜನರಿದ್ದರೆ ದೊಡ್ಡ ಕುಕ್ಕರ್ ಬಳಸಿ ಅದರೊಳಗೆ ಒಂದೇ ಬಾರಿ ಎಲ್ಲವನ್ನೂ ಬೇರೆ ಬೇರೆ ಪಾತ್ರೆಯಿಟ್ಟು ಬೇಯಿಸಬಹುದು. ಇದರಿಂದ ದೊಡ್ಡ ಪ್ರಮಾಣದಲ್ಲಿ ಗ್ಯಾಸ್ ಉಳಿತಾಯ ಸಾಧ್ಯ.
- ಅಡುಗೆ ಮೊದಲೇ ಮಾಡುವವರು ಅನ್ನ ಬೇಗ ಮಾಡಿದರೆ ಆರಿ ಹೋಗುತ್ತದೆ ಎನ್ನುವ ಭಾವನೆ ಇದ್ದವರು ಊಟ ಮಾಡುವ ಸ್ವಲ್ಪ ಮೊದಲು ಅನ್ನವನ್ನು ಅದೇ ಕುಕ್ಕರ್ ನಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಬಹುದು.
- ಸಂಜೆ ಪ್ರತ್ಯೇಕವಾಗಿ ಅಡುಗೆ ಮಾಡುವ ಬದಲು ಸಾಂಬಾರ ಮತ್ತಿತರ ಕೆಲವು ಪದಾರ್ಥಗಳನ್ನು ಸಂಜೆಯ ಸಲುವಾಗಿ ಕೂಡ ಮಧ್ಯಾಹ್ನವೇ ಮಾಡಿಕೊಳ್ಳಬಹುದು. ಸಂಜೆ ಬಿಸಿ ಮಾಡಿಕೊಂಡು ಊಟ ಮಾಡಬಹುದು. ಇದರಿಂದಲೂ ಸಾಕಷ್ಟು ಗ್ಯಾಸ್ ಉಳಿತಾಯವಾಗುತ್ತದೆ.
- ನೀರು ಕಾಯಿಸುವಾಗ, ಸಾಂಬಾರ ಕುದಿಸುವಾಗ ಅಗತ್ಯಕ್ಕಿಂತ ಹೆಚ್ಚು ಹೊತ್ತು ಕುದಿಸುವ ರೂಢಿ ಕೆಲವರಲ್ಲಿದೆ. ಸಮಯಕ್ಕೆ ಸರಿಯಾಗಿ ಬೆಂಕಿ ಆರಿಸುವುದು ಮುಖ್ಯ.
- ಸ್ನಾನಕ್ಕೆ ಗ್ಯಾಸ್ ಬಳಸಿ ನೀರು ಕಾಯಿಸಿಕೊಳಳುವವರು ಅಗತ್ಯಕ್ಕಿಂತ ಹೆ್ಚ್ಚು ನೀರನ್ನು ಕಾಯಿಸಿಕೊಂಡು ವ್ಯರ್ಥ ಮಾಡುತ್ತಾರೆ. ನಿಮಗೆ ಎಷ್ಟು ಬೇಕೋ ಅಷ್ಟನ್ನೇ ಕಾಯಿಸಿಕೊಳ್ಳಿ. ಕೆಲವರು ಕಾಯಿಸಿದ ತಕ್ಷಣ ಸ್ನಾನ ಮಾಡುವ ಬದಲು ಅದು ಆರಿದ ನಂತರ ಮತ್ತೆ ಮತ್ತೆ ಕಾಯಿಸುವ ಚಾಳಿ ಇಟ್ಟುಕೊಂಡಿರುತ್ತಾರೆ.
- ಮನೆಗೆ ಅತಿಥಿಗಳು ಬಂದಾಗ ಅವರ ಇಷ್ಟವನ್ನು ತಿಳಿದುಕೊಂಡು ಅಡುಗೆ, ತಿಂಡಿ, ಪೇಯ ತಯಾರಿಸಿ. ಸುಮ್ಮನೇ ಮಾಡಿ ಅವರು ತಿನ್ನದಿದ್ದರೆ ಮಾಡಿದ್ದೂ ವ್ಯರ್ಥ, ಗ್ಯಾಸ್ ಕೂಡ ಖರ್ಚು.
- ಅಡುಗೆ ಕೆಲಸ ಶುರು ಮಾಡುವ ಮುನ್ನ ಏನೇನು ಮಾಡಬೇಕು, ಅದಕ್ಕೆ ಏನೇನು ಸಿದ್ಧತೆ ಬೇಕು, ಯಾವ ತರಕಾರಿ ಬೇಕು ಎಂದು ಯೋಚಿಸಿ ಎಲ್ಲವನ್ನೂ ಮೊದಲೇ ಸಿದ್ಧಪಡಿಸಿಟ್ಟುಕೊಂಡು ಗ್ಯಾಸ್ ಹಚ್ಚಿ. ಗ್ಯಾಸ್ ಹಚ್ಚಿಕೊಂಡು ತರಕಾರಿ ಹೆಚ್ಚಲು ಹೋಗಬೇಡಿ.
- ಮನೆಯಲ್ಲಿ 4 ಜನರಿದ್ದರೆ 4 ಬಾರಿ ಚಹ ಮಾಡುವ ರೂಢಿಯಿದ್ದರೆ ಅದರಿಂದ ಹೊರಬನ್ನಿ. ಎಲ್ಲರಿಗೂ ಒಮ್ಮೆಲೆ ಚಹಾ ಮಾಡಿ, ಒಟ್ಟಿಗೆ ಕುಳಿತು ಕುಡಿದರೆ ಅದರಿಂದ ಗ್ಯಾಸ್ ಉಳಿತಾಯದ ಜೊತೆಗೆ ಎಲ್ಲರೂ ಒಟ್ಟಿಗೆ ಕುಳಿತು ಕುಡಿಯುವ ಖುಷಿಯೂ ಸಿಗುತ್ತದೆ.
- ಇನ್ನು, ನೀವೇ ಸರಿಯಾಗಿ ಯೋಚಿಸಿ ಅಡುಗೆ ಮನೆ ಪ್ರವೇಶಿಸಿದರೆ ಇನ್ನೂ ಸಾಕಷ್ಟು ವಿಧದಲ್ಲಿ ಗ್ಯಾಸ್ ಉಳಿತಾಯ ಮಾಡಬಹುದು.
ಈ ಲೇಖನವನ್ನು ಎಲ್ಲರಿಗೂ ಶೇರ್ ಮಾಡಿ .
ನಿಮ್ಮ ಬಳಿ ಇನ್ನೂ ಹೆಚ್ಚಿನ ಸಲಹೆ, ಯೋಚನೆಗಳಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.
ವಾಟ್ಸಪ್ – 8197712235.
ನಿಖರ, ನಿರಂತರ ಮತ್ತು ನಿಸ್ಪಕ್ಷಪಾತ ಸುದ್ದಿಗಳಿಗಾಗಿ ಪ್ರತಿವಾಹಿನಿ ಗ್ರುಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ : https://chat.whatsapp.com/EOSkHSyr2jh9bFplrf4cK1
ಉಳಿತಾಯ: ತಪ್ಪು ತಿಳಿವಳಿಕೆಯಿಂದ ಮೊದಲು ಹೊರ ಬನ್ನಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ