Latest

ಮದುವೆ ಸಡಗರದಲ್ಲಿ ಕಲಾದೇವಿಯ ಆರಾಧನೆ

ಅನೇಕರು ತಮ್ಮ ತಮ್ಮ ಮಕ್ಕಳ ಮದುವೆ ಸಮಾರಂಭದಲ್ಲಿ ಸಂಗೀತ ಕಛೇರಿಯನ್ನೊ,’ಆರ್ಕೆಸ್ಟ್ರಾ’ವನ್ನೋ, ನೃತ್ಯ ಕಾರ್ಯಕ್ರಮವನ್ನೊ ಆಯೋಜಿಸುತ್ತಾರೆ.

ಪ್ರತಿಷ್ಠಿತ ಕುಟುಂಬಗಳವರಿಗೆ ಅದೇ ‘ಖಯಾಲಿ’ ಆಗಿರುತ್ತದೆ. ಮತ್ತು ಶ್ರೀ ಸಾಮಾನ್ಯ ಜನಸಮುದಾಯ ಕೂಡಾ ಅದನ್ನೇ ಅನುಸರಿಸುತ್ತಿದೆ.! ಆದರೆ, ಎಲ್ಲೋ ಅಪರೂಪದ ಸೃಜನಶೀಲ ಮನಃಸ್ಥಿತಿ ಇರುವವರು ಯೋಚಿಸುವ ಬಗೆಯೇ ಭಿನ್ನವಾಗಿರುತ್ತದೆ. ಅವರು ಹಮ್ಮಿಕೊಳ್ಳುವ ಕಾರ್ಯಕ್ರಮಗಳೆಲ್ಲ ಅನನ್ಯವಾಗಿಯೇ ಇರುತ್ತವೆ. ಮೊನ್ನೆ ದಿ-19.3.2023ರಂದು ಕಲಬುರ್ಗಿಯ ‘ನಿಸರ್ಗ ಪಿ.ಯು ಕಾಲೇಜಿನ ಆವರಣದಲ್ಲಿ ಒಂದು ಅತ್ಯಂತ ಚೇತೋಹಾರಿ ಕಾರ್ಯಕ್ರಮ ನಡೆಯಿತು.

ಕಲಬುರಗಿಯ ಗಮನಾರ್ಹ ಸೃಜನಶೀಲ ದೃಶ್ಯ ಕಲಾವಿದರುಗಳಲ್ಲಿ ಒಬ್ಬರಾದ ಬಾಬುರಾವ್ ಎಚ್. ಅವರು ಉತ್ತಮ ಪ್ರಿಂಟ್ ಮೇಕರ್, ಅಷ್ಟೇ ಉತ್ತಮ ಶಿಲ್ಪಿ ಮತ್ತು ರಂಗಕರ್ಮಿ ಕೂಡಾ) ತಮ್ಮ ಮಗಳು ನಯನಾರವರ ಮದುವೆ ನಿಮಿತ್ತ ರಾಜ್ಯ&ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಸುಮಾರು 30ಕ್ಕಿಂತಲೂ ಹೆಚ್ಚು ದೃಶ್ಯಕಲಾವಿದರುಗಳನ್ನು ಆಮಂತ್ರಿಸಿ ಒಂದು ದಿನದ ದೃಶ್ಯ ಕಲಾ ಶಿಬಿರ ಆಯೋಜಿಸಿದ್ದರು.

ಅಂದಹಾಗೆ, ಈ ಶಿಬಿರ ಹಮ್ಮಿಕೊಳ್ಳುವಲ್ಲಿ ಅವರು ಕಾರ್ಯ ನಿರ್ವಹಿಸುತ್ತಿರುವ ‘ಶ್ರೀ ಗುರು ವಿದ್ಯಾಪೀಠ-ಕಲಬುರಗಿ ‘ಇದರ ಅಂಗಸಂಸ್ಥೆ ನಿಸರ್ಗ ಪಿಯು ಕಾಲೇಜಿನ ಮುಖ್ಯಸ್ಥ ಬಸವರಾಜ ದಿಗ್ಗಾವಿಯವರು ಹಾಗೂ ಬಾಬುರಾವ್ ರವರ ಹತ್ತಿರದ ಸಂಬಂಧಿ ದೃಶ್ಯ ಕಲಾವಿದ ಪರಶುರಾಮ ಪಿ. ಮತ್ತು ಅವರ ‘ದೃಶ್ಯ ಬೆಳಕು’ ತಂಡದ ಪೂರ್ಣ ಸಹಕಾರ ದೊರೆತಿದ್ದು ಉಲ್ಲೇಖನೀಯ ಸಂಗತಿ.

ಸುಮಾರು 2.5ಅಡಿ×2ಅಡಿ ಅಳತೆಯ ಕ್ಯಾನವಾಸ್ ಮೇಲೆ ಆಕ್ರಿಲಿಕ್ ಬಣ್ಣಗಳೊಡನೆ ಶಿಬಿರದಲ್ಲಿ ಭಾಗಿಗಳಾದ ಕಲಾವಿದರು ಭಾವಲೋಕದಲ್ಲಿ ವಿಹರಿಸಿದರು,ತಮ್ಮ ತಮ್ಮ ಮನೋರಾಜ್ಯದ ಭಾವಜಗವನ್ನು ಕ್ಯಾನವಾಸ್ ಎಂಬ ಭಿತ್ತಿಯ ಮೇಲೆ ಬಗೆ ಬಗೆಯ ವರ್ಣ ವಿಲಾಸದೊಡನೆ ಅಭಿವ್ಯಕ್ತಿಸಿದರು.

ರಾಷ್ಟ್ರ -ಅಂತಾರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರಾದ ವಿಜಯಹಾಗರಗುಂಡಗಿ, ಈರಣ್ಣ ಜಿ.ಆರ್ ರವರುಗಳನ್ನೂ ಒಳಗೊಂಡಂತೆ-ಮೋಹನ ಸಿತನೂರ್, ಬಸವರಾಜ ಉಪ್ಪಿನ, ಬಿಂದುರಾಯ್ ಬಿರಾದಾರ, ಚಂದ್ರಹಾಸ್ ಜಾಲಿಹಾಳ, ಬಸವರಾಜ ಕಾಮಾಜಿ, ಬಿ.ಕೆ.ಬಡಿಗೇರ, ಅಂಬಾರಾಯ್ ಚಿನ್ಮಳ್ಳಿ, ರಮೇಶ್ ಚವ್ಹಾಣ, ಬಿ.ಎನ್. ಪಾಟೀಲ್, ಡಾ.ಅಶೋಕ್ ಶೆಟ್ಕಾರ, ಡಾ.ಸಂತೋಷ ಕುಮಾರ್ ಕುಲಕರ್ಣಿ, ಡಾ.ಶಿವಾನಂದ ಬಂಟನೂರ್, ಡಾ.ಮೋಹನ್ ಪಾಂಚಾಳ, ಜಲಜಾಕ್ಷಿ ಕುಲಕರ್ಣಿ, ಮೀನಾಕ್ಷಿ, ನಾಗರಾಜ್ ಕುಲಕರ್ಣಿ, ಮುರಳಿಧರ ಕುಲಕರ್ಣಿ, ವಿಷ್ಣು ಕುಮಾರ್, ರಮೇಶ (ಹೈದರಾಬಾದ್ ಕಲಾವಿದರು),ಶೀಲವಂತ ಯಾದಗೀರ್, ದತ್ತಾತ್ರೇಯ ಭಟ್ಟ, ಎನ್.ಟಿ. ಮಂಜುನಾಥ್ ಮೊದಲಾದ ಹಿರಿ-ಕಿರಿಯ ಕಲಾವಿದರು ಒಂದು ದಿನದ ಆ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಆಗಮಿಸಿದ ಗಣ್ಯರು ಮತ್ತು ದೃಶ್ಯ ಕಲಾವಿದರುಗಳನ್ನು ‘ದೃಶ್ಯ ಬೆಳಕು’ಸಂಚಿಕೆ ಪ್ರತಿ ನೀಡಿ ಸ್ವಾಗತಿಸಿದ್ದು,ಮುಕ್ತಾಯದಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ಬಾಬುರಾವ್ ರವರು ತಮ್ಮ ಅನನ್ಯ ಕಲಾಕೃತಿ ‘ಸ್ಮೈಲಿಂಗ್ ಮೊನಾಲಿಸಾ’ದ ಕ್ಯಾನವಾಸ್ ಪ್ರಿಂಟ್ ಅನ್ನು ಒಳ್ಳೆಯ ಪ್ರೇಂ ಹಾಕಿಸಿ ಸ್ಮರಣಿಕೆಯಾಗಿ ನೀಡಿದ್ದು , ಜೊತೆಗೆ ದೂರದೂರುಗಳಿಂದ ಬಂದ ಕಲಾವಿದರುಗಳಿಗೆ ಒಳ್ಳೆಯ ವಸತಿ-ಊಟೋಪಚಾರ ವ್ಯವಸ್ಥೆಗೊಳಿಸಿದ್ದು ಭಾಗಿಗಳಾದ ಎಲ್ಲ ಕಲಾವಿದರುಗಳ ಪ್ರಶಂಸೆಗೆ ಪಾತ್ರವಾಯಿತು.

ಕರ್ನಾಟಕ -ಕಲ್ಯಾಣ ಕರ್ನಾಟಕದ ಮಟ್ಟಿಗೆ ದೃಶ್ಯಕಲಾವಿದರೊಬ್ಬರು ತಮ್ಮ ಮಗನೊ/ಮಗಳೊ ಲಗ್ನವಾಗುವ ಸಂಭ್ರಮದಲ್ಲಿ ಈ ರೀತಿಯಾಗಿ ಚಿತ್ರಕಲಾ ಶಿಬಿರವನ್ನು ನಾಡಿನ ಮತ್ತು ಹೊರನಾಡಿನ ಕಲಾವಿದರುಗಳನ್ನು ಆಮಂತ್ರಿಸಿ ಆಯೋಜಿಸಿದ್ದು ಇತ್ತೀಚಿನ ವರ್ಷಗಳಲ್ಲಿ ವಿರಳಾತಿವಿರಳ. ಆದರೆ, ಯಾವಾಗಲೂ ಅಭೂತಪೂರ್ವ ಸೃಜನಶೀಲ ಪ್ರಯೋಗಿಗಳಾದ ಬಾಬುರಾವ್ ಎಚ್. ಈ ಚಿತ್ರ ಕಲಾಶಿಬಿರವನ್ನು ಬಹಳ ಸೊಗಸಾಗಿ-ಅಚ್ಚುಕಟ್ಟಾಗಿ ಬಸವರಾಜ ದಿಗ್ಗಾವಿ ಹಾಗೂ ದೃಶ್ಯ ಬೆಳಕು ತಂಡದ ಸಹಕಾರದಲ್ಲಿ ನಡೆಸಿದುದು ಬಹುಕಾಲ ನಾಡಿನ ದೃಶ್ಯ ಕಲಾ ವಲಯದಲ್ಲಿ ನೆನಪಿನಲ್ಲುಳಿಯುವ ಕಾರ್ಯಕ್ರಮ ಎನಿಸಿತು.

ಇಂತಹ ಆಲೋಚನೆ ದೃಶ್ಯ ಕಲಾವಲಯದಲ್ಲಿ ಹೆಚ್ಚು ಹೆಚ್ಚು ಜಾಗೃತವಾಗಬೇಕಿದೆ.ಏಕೆಂದರೆ ಈ ರೀತಿಯ ‘ದೃಶ್ಯ ಕಲಾ ಸಮ್ಮಿಳನ’ಮೇಲಿಂದ ಮೇಲೆ ಆಯೋಜನೆ ಆಗುತ್ತಿದ್ದರೆ ಮಾತ್ರ ಭಿನ್ನ ಭಿನ್ನ ಧೋರಣೆ-ಸಂಸ್ಕೃತಿ-ಪರಿಸರ ಪ್ರಭಾವಗಳಿಂದ ಬಂದಿರುವ/ಬರುವ ದೃಶ್ಯ ಕಲಾವಿದರುಗಳು ಪರಸ್ಪರ ಸೌಹಾರ್ದ ಸಂಬಂಧ/ಸ್ನೇಹ,ವಿಚಾರ ವಿನಿಮಯ ನಡೆಸಲು ಅವಕಾಶ ಆಗುತ್ತದೆ. ತನ್ಮೂಲಕ ಪರೋಕ್ಷವಾಗಿ ದೃಶ್ಯ ಕಲಾ ವಲಯದ ಬೆಳವಣಿಗೆಗೂ ಸಹಕಾರಿ ಆಗುತ್ತದೆ. ದೃಶ್ಯ ಕಲಾವಲಯ ಸಂಘಟನಾತ್ಮಕವಾಗಿ ಗಟ್ಟಿಗೊಳ್ಳಲು ಸಹಕಾರಿಯಾಗುತ್ತದೆ.
ಲೇಖನ: ದತ್ತಾತ್ರೇಯ ಎನ್. ಭಟ್ಟ,
ಚಿತ್ರಗಳು: ಲೇಖಕರವು & ದೃಶ್ಯ ಬೆಳಕು ತಂಡ-ಕಲಬುರಗಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button