ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಒಂದು ವಾರದಿಂದ ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 22ರ ವರೆಗೆ ಒಂದು ವಾರ ಕಠಿಣ ಲಾಕ್‍ಡೌನ್ ಜಾರಿ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಕೋವಿಡ್-19 ನಿಯಂತ್ರಣ ವಿಶೇಷ ಅಧಿಕಾರ ಬಳಸಿ ಈ ಆದೇಶ ಹೊರಡಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹಾಲು, ತರಕಾರಿ, ಹಣ್ಣು, ದಿನಪತ್ರಿಕೆ ಮಾರಾಟಕ್ಕೆ ಸಂಜೆ 5ರ ತನಕ ಅನುಮತಿ ನೀಡಲಾಗಿದೆ. ಅಗತ್ಯ ಸೇವೆಗಳಾದ ಔಷಧಿ, ಆಸ್ಪತ್ರೆ, ಸರ್ಕಾರಿ ಕಚೇರಿ, ಬ್ಯಾಂಕ್ ಗಳಿಗೆ ಅನುಮತಿ ನೀಡಲಾಗಿದೆ. ರೈತರ ಅನುಕೂಲಕ್ಕಾಗಿ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ರಸಗೊಬ್ಬರ, ಕೃಷಿ ಉಪಕರಣಗಳು, ಬೀಜ, ಬೆಳೆ ಮಾರಾಟಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ.
ಒಂದು ವಾರ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧವಿದ್ದು, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಪಾರ್ಕ್, ಟೀ ಪಾಯಿಂಟ್, ಸಭೆ, ಸಮಾರಂಭಕ್ಕೆ ನಿರ್ಬಂಧ ವಿಧಿಸಲಾಗಿದೆ. ಲಾಕ್‍ಡೌನ್ ಸಮಯದಲ್ಲಿ ಅನವಶ್ಯಕವಾಗಿ ಹೊರಗಡೆ ಸಂಚರಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಿರ್ದೇಶಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ