*ದ್ವೇಷಬಿಟ್ಟು ಸಾಮರಸ್ಯದ ಜೀವನ ನಡೆಸೋಣ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಯಾದವಾಡ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾದವಾಡದಲ್ಲಿ ನಮಗೆ ಅಭೂತಪೂರ್ವ ಬೆಂಬಲ ಸಿಕ್ಕರೂ ಸೋಲಬೇಕಾಯಿತು. ಸೋತೆವು ಎಂದ ಮಾತ್ರಕ್ಕೆ ಕೈಕಟ್ಟಿ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯಾದವಾಡ ಘಟಕ ವತಿಯಿಂದ ಆಯೋಜಿಸಲಾಗಿದ್ದ ಯಾದವಾಡ ಸಾಂಸ್ಕೃತಿಕ ಉತ್ಸವ-2024 ರ ಕಾರ್ಯಕ್ರವನ್ನು ಉದ್ಘಾಟಿಸಿ, ಮಾತನಾಡಿದ ಸಚಿವರು, ಲೋಕಸಭಾ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಮನೆಯಲ್ಲಿ ಕುಳಿತುಕೊಳ್ಳುವ ಜಾಯಮಾನ ನಮ್ಮದಲ್ಲವೇ ಅಲ್ಲ ಎಂದರು.
ಯಾವುದೇ ಕೆಲಸಗಳನ್ನು ಮಾಡಲು ಮುಂದಾದರೆ ವಿಘ್ನಗಳಿರುತ್ತವೆ. ಅದನ್ನು ಜಯಿಸಿ ಇಲ್ಲಿನ ಯುವಕರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ, ಹೀಗೆ ಸತತ 16 ವರ್ಷಗಳಿಂದ ಯಾದವಾಡ ಸಾಂಸ್ಕೃತಿಕ ಉತ್ಸವ ಆಯೋಜಿಸುತ್ತಿರುವ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ನಮ್ಮ ಸಂಸ್ಕೃತಿ ಪಸರಿಸಲು, ಕನ್ನಡದ ಮೇಲಿನ ಪ್ರೀತಿ, ದೇಶಭಕ್ತಿ. ನಾಡಭಕ್ತಿ ನಮಗೆಲ್ಲರಿಗೂ ಇದೆ. ರಾಜ್ಯದ ತುಂಬೆಲ್ಲ ಮಳೆ ಚೆನ್ನಾಗಿ ಆಗಿದೆ. ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಮಾಡುತ್ತಿದೆ ಎಂದು ಸಚಿವರು ಹೇಳಿದರು.
ನಾವು ಮಾಡುವ ಕೆಲಸಗಳೇ ನಮಗೆ ಶ್ರೀರಕ್ಷೆ, ಅವುಗಳನ್ನು ಸಾಕ್ಷಿಯಾಗಿ ಬಿಟ್ಟು ಹೋಗಬೇಕು. ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತ ಕೆಲಸ ಮಾಡಬೇಕು. ನಾನೇ ಎಲ್ಲವೂ ಎಂದರೆ ನಮ್ಮಷ್ಟು ಮೂರ್ಖರು ಯಾರೂ ಇಲ್ಲ ಎಂದರು.
ಹಾಲು ಕುಡಿದವರೇ ಬದುಕುವುದು ಕಷ್ಟ, ಇನ್ನು ವಿಷ ಕುಡಿದವರು ಬದುಕುತ್ತಾರಾ?. ದ್ವೇಷ ಬಿಡಬೇಕು, ಎಲ್ಲರೂ ಒಂದಾಗಿ ಹೋಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.

ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ ಹೊಸ ಉತ್ಸಾಹ, ಚೈತನ್ಯವನ್ನು ತುಂಬುತ್ತವೆ, ಎಷ್ಟೋ ಕಲಾವಿದರನ್ನು ಬೆಳಕಿಗೆ ತರುತ್ತವೆ, ಎಷ್ಟೊ ಕಲಾವಿದರ ಜೀವನ ರೂಪಿಸುತ್ತವೆ. ಜೊತೆಗೆ, ಪಕ್ಷ ಭೇದ ಮರೆತು ಜನರನ್ನೆಲ್ಲ ಒಂದೆಡೆ ಸೇರಿಸುವ ಮೂಲಕ ಊರಿನ ಒಗ್ಗಟ್ಟಿಗೆ, ಬೆಳವಣಿಗೆಗೆ, ಅಭಿವೃದ್ಧಿಗೆ ಕಾರಣವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಯಾದವಾಡ ಚೌಕಿಮಠದ ಪರಮಪೂಜ್ಯ ಶಿವಯೋಗಿ ದೇವರು, ಕುಮಾರ ಹಿರೇಮಠ್ (ಪಟ್ಟದ ದೇವರು ಯಾದವಾಡ್), ಶಿವಪ್ಪಗೌಡ ನ್ಯಾಮಗೌಡರ್, ಕಾಂಗ್ರೆಸ್ ಮುಖಂಡರಾದ ಮಹಾಂತೇಶ್ ಕಡಾಡಿ, ಶ್ರೀಹರ್ಷಾ ನಿಲೋಪಂತ್, ಸಂಗಮೇಶ್ ಕತ್ತಿ, ರಾವುಸಾಬ್ ಬೆಳಕೊಡ್, ಶಿವನಗೌಡ ಪಾಟೀಲ, ಈರಣ್ಣ ಕೊಣ್ಣೂರ್, ಮಲ್ಲಿಕಾರ್ಜುನ ಚೌಕಾಶಿ, ರಾಜನಗೌಡ ಪಾಟೀಲ, ಈರಣ್ಣ ಮುದ್ದಾಪುರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ