*ಬಾನು ಮುಷ್ತಾಕ್ ಈ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ದಸರಾ ಉದ್ಘಾಟನೆಗೆ ನಮ್ಮ ವಿರೋಧವಿದೆ ಎಂದ ಸಂಸದ ಯದುವೀರ್ ಒಡೆಯರ್*

ಪ್ರಗತಿವಾಹಿನಿ ಸುದ್ದಿ: ಬಾನು ಮುಷ್ತಾಕ್ ಕನ್ನಡಾಂಬೆಯ ಕುರಿತು 2023ರಲ್ಲಿ ನೀಡಿದ್ದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಬಿಜೆಪಿ ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್ ಒಡೆಯರ್, ಬಾನು ಮುಷ್ತಾಕ್ ಮೊದಲು ಕನ್ನಡಾಂಬೆ ಬಗ್ಗೆ ನೀಡಿದ್ದ ಹೇಳಿಕೆ ಬಗ್ಗೆ ಸ್ಪಷ್ಟನೆಕೊಡಲಿ. ಇಲ್ಲವಾದರೆ ಅವರು ದಸರಾ ಉದ್ಘಾಟಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದ್ದಾರೆ.
ದಸರಾ ಉದ್ಘಾಟನೆಗೆ ಸರ್ಕಾರ ಬಾನು ಮುಷ್ತಾಕ್ ಆಯ್ಕೆ ಮಾಡಿದಾಗ ನಾವು ಸ್ವಾಗತಿಸಿದ್ದೆವು. ನಾನು ಬಾನು ಮುಷ್ತಾಕ್ ಕನ್ನಡಾಂಬೆ ಭುವನೇಶ್ವರಿ ಬಗ್ಗೆ ನೀಡಿದ್ದ ಹೇಳಿಕೆಯನ್ನು ನೋಡಿರಲಿಲ್ಲ. ಈಗ ನಾನು ಈ ಬಗ್ಗೆ ನೋಡಿದ್ದೇನೆ. ಅವರು 2023ರಲ್ಲಿ ತಾಯಿ ಭುವನೇಶ್ವರಿ ಬಗ್ಗೆ ನೀಡಿದ್ದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಲಿ. ಅವರು ಇಲ್ಲಿನ ಧಾರ್ಮಿಕ ಆಚರಣೆ, ಇಲ್ಲಿನ ಭಾವನೆ ಬಗ್ಗೆ ಸ್ಪಷ್ಟನೆ ನೀಡಿದರೆ ದಸರಾ ಉದ್ಘಾಟನೆಗೆ ನಮ್ಮ ಅಭ್ಯಂತರವಿಲ್ಲ ಎಂದರು.
ಮೊದಲು ಅವರು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ಕೊಟ್ಟು ದಸರಾ ಉದ್ಘಾಟನೆಗೆ ಬರಲಿ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಯಲ್ಲಿ ಯಾವುದೇ ಹಿಂದೂಗಳ ಭಾವನೆಗೆ ಧಕ್ಕೆಯಾಗದಂತೆ ಅವರ ನಡೆ ಇರಲಿದೆಯೇ ಎಂದು ನಾವು ಪ್ರಶ್ನಿಸಿದ್ದೇವೆ ಎಂದರು.