*ನಿಜ ಹೇಳಬೇಕೆಂದರೆ ನನ್ನ ಬಗ್ಗೆಯೇ ನನಗೆ ಅಸಹ್ಯವಾಗಿದೆ; ನೊಂದು ನುಡಿದ ನಟ ಯಶ್*
ಪ್ರೀತಿ ಗೌರವ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ
ಪ್ರಗತಿವಾಹಿನಿ ಸುದ್ದಿ; ಗದಗ: ನಟ ಯಶ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಟೌಟ್ ಕಟ್ಟಲು ಹೋಗಿದ್ದ ವೇಳೆ ಗದಗ ಜಿಲ್ಲೆಯ ಸೊರಣಗಿಯಲ್ಲಿ ವಿದ್ಯುತ್ ಅವಘಡದಲ್ಲಿ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದು, ಮೃತರ ಕುಟುಂಬವನ್ನು ಭೇಟಿಯಾದ ಯಶ್, ಸಾಂತ್ವನ ಹೇಳಿದರು.
ದುರಂತದ ಬಗ್ಗೆ ತಿಳಿಯುತ್ತಿದ್ದಂತೆ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ದುಬೈನಿಂದ ಆಗಮಿಸಿದ ನಟ ಯಶ್, ನೇರವಾಗಿ ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿದರು. ಮೃತ ಅಭಿನಿಗಳಾದ ಹನುಮಂತ, ಮುರಳಿ ಹಾಗೂ ನವೀನ್ ಕುಟುಂಬದವನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಯಶ್, ಬ್ಯಾನರ್ ಹಾಕಿ ಅಭಿಮಾನ ವ್ಯಕ್ತಪಡಿಸಲಿ ಎಂದು ನಾವ್ಯಾರೂ ಇಷ್ಟಪಡಲ್ಲ. ಪ್ರತಿ ವರ್ಷ ಹುಟ್ಟುಹಬ್ಬ ಬಂದಾಗಲೂ ಇಂತದ್ದೇನಾದರೂ ಒಂದು ಘಟನೆ ನಡೆದರೆ ಹುಟ್ಟುಹಬ್ಬ ಎಂದರೇ ಭಯವಾಗಿ ಬಿಡುತ್ತದೆ. ಈ ಘಟನೆ ನೋಡಿ ನನ್ನ ಬಗ್ಗೆಯೇ ನನಗೆ ಅಸಹ್ಯವಾಗಿಬಿಟ್ಟಿದೆ ಎಂದು ಬೇಸರಿಸಿದರು.
ಬ್ಯಾನರ್ ಕಟ್ಟುವುದು, ಬೈಕ್ ನಲ್ಲಿ ಚೇಸ್ ಮಾಡಿಕೊಂಡು ಬರುವುದು ಇಂತಹ ಅಭಿಮಾನಗಳನ್ನು ಬಿಟ್ಟುಬಿಡಿ. ನಿಜಕ್ಕೂ ನೀವು ಪ್ರೀತಿ ತೋರಬೇಕು ಎಂಬುದಿದ್ದರೆ ಒಳ್ಳೆಯ ಕೆಲಸ ಮಾಡಿ. ಪ್ರತಿಯೊಬ್ಬ ಅಭಿಮಾನಿಯೂ ಅವರವರ ಬದುಕಲ್ಲಿ ಬೆಳೆದವರೇ. ನಮ್ಮ ಮೇಲಿನ ಅಭಿಮಾನಕ್ಕಾಗಿ ನಿಮ್ಮ ಜೀವಕ್ಕೆ ಹಾನಿ ಮಾಡಿಕೊಳ್ಳಬೇಡಿ. ಪ್ರೀತಿ, ಗೌರವ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.
ಸಹಾಯ, ಘೋಷಣೆ ಯಾರು ಬೇಕಾದರೂ ಮಾಡಬಹುದು. ಆದರೆ ಹೋದ ಜೀವ ಬರಲು ಸಾಧ್ಯವೇ? ಮೂರು ಕುಟುಂಬ ಮೂರು ಮಕ್ಕಳನ್ನು ಕಳೆದುಕೊಂಡಿದೆ. ಮನೆಗೆ ಮಗ ಬರುಲು ಸಾಧ್ಯವೇ? ಏನು ಹೇಳಬೇಕು? ಎಂದು ನೊಂದು ನುಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ