Belagavi NewsBelgaum NewsElection NewsKannada NewsKarnataka NewsPolitics

*ಜಾರಕಿಹೊಳಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್*

ಪ್ರಗತಿವಾಹಿನಿ ಸುದ್ದಿ: ಎಲ್ಲಾ ಕಡೆ ಜಾರಕಿಹೊಳಿ ಕುಟುಂಬಕ್ಕೆ ಮೀಸಲಿಟ್ಟರೆ ಬೇರೆ ಸಾಮಾಜದ ನಾಯಕರು ಏನು ಮಾಡಬೇಕು ಎಂದು ಜಾರಕಿಹೊಳಿ ಕುಟುಂಬದ ವಿರುದ್ಧ ಶಾಸಕ ಯತ್ನಾಳ್ ಗುಡುಗಿದ್ದಾರೆ.‌

ಜಾರಕಿಹೊಳಿ ಕುಟುಂಬಕ್ಕೆ ಅಭ್ಯರ್ಥಿ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷದ ಧುರೀಣರಿಗೂ ಕೂಡ ಬೇಸರ ತಂದಿದ್ದು, ಇದರಿಂದ ಬಹುಪಾಲು ಕಾಂಗ್ರೆಸ್ ನಾಯಕರೂ ಕೂಡ ಬಿಜೆಪಿ ಅಭ್ಯರ್ಥಿಯನ್ನೇ ಬೆಂಬಲಿಸುತ್ತಾರೆ ಎಂದ ಅವರು ಪ್ರತಿ ಚುನಾವಣೆಯಲ್ಲಿಯೂ ಸಹ ಜಾತೀಯ ವಿಷ ಬೀಜ ಬಿತ್ತಿ ಲಾಭ ಮಾಡಿಕೊಳ್ಳತ್ತಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷದ ಚುನಾವಣೆಯ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಅವರ ಪ್ರಣಾಳಿಕೆಯಲ್ಲಿ ಒಂದೇ ಒಂದು ಧರ್ಮದ ಪರವಾದ ಅನೇಕ ಅಂಶಗಳಿವೆ. ಜೊತೆಗೆ ಅಗ್ನಿಪಥ ಯೋಜನೆಯನ್ನು ಕೈ ಬಿಡುತ್ತೇವೆ ಎಂದು ಉಲ್ಲೇಖಿಸಿದ್ದಾರೆ ಎಂದ ಅವರು ಸ್ವಾತಂತ್ರ್ಯ ದ ನಂತರ ನಹರು ಮಾಡಿದ ಅನೇಕ ಪ್ರಮಾದಗಳಿಂದಲೇ ದೇಶದಲ್ಲಿ ಅರಾಜಕತೆ ಉಂಟಾಗಲು ಕಾರಣವಾಗಿದೆ ಎಂದರು.
ಪಾಕಿಸ್ತಾನಕ್ಕೆ ಅನಕೂಲವಾಗುವಂತೆ ಜಮ್ಮು ಕಾಶ್ಮೀರಕ್ಕೆ ನೇಹರು 370 ನೇ ವಿಧಿ ಜಾರಿಗೆ ತಂದರು. ಆಗ ಡಾ.ಬಾಬಾಸಾಹೇಬ ಅಂಬೇಡ್ಕರ್ ವಿರೋಧಿಸಿದರೂ ಕೂಡ ನೇಹರು ಈ ವಿಧಿಯನ್ನು ಜಾರಿಗೊಳಿಸಿದರು. ಅಂದಿನಿಂದಲೇ ಇದನ್ನು ವಿರೋಧಿಸಿ ನಮ್ಮ ಹಿರಿಯರಾದ ಪಂ. ಶ್ಯಾಮಪ್ರಸಾದ ಮುಖರ್ಜಿ ಹೋರಾಟ ಮಾಡಿದ್ದರು ಎಂದ ಅವರು ಅಂದಿನಿಂದ ಉಳಿದುಕೊಂಡ ಬಂದ 370 ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿದರು ಇಂತಹ ಪ್ರಧಾನಿಯನ್ನು ನಾವು ಪುನರಾಯ್ಕೆ ಮಾಡಿ ಭಾರತವನ್ನು ಮತ್ತು ಸನಾತನ ಧರ್ಮವನ್ನು ಉಳಿಸಬೇಕಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದು ನಿಶ್ಚಿತವಾಗಿದ್ದು, ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಲಿಂಗಾಯತ ಬಂಧುಗಳಿಗೆ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸುವೆ ಎಂದ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಣ್ಣಾಸಾಹೇಬ ಜೊಲ್ಲೆ ಇವರಿಗೆ ಮೇ 7 ರಂದು ಅತೀ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿ ಪ್ರಧಾನಿ ಮೋದಿಯವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

ಅಥಣಿಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,  ಜಾರಕಿಹೊಳಿ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿದ್ದರಿಂದ ಅವರ ಪಕ್ಷದಲ್ಲೆ ಸಾಕಷ್ಟು ಸಮಾಧಾನ ಇದೆ.‌ ಇದರ ಲಾಭ ಬಿಜೆಪಿಗೆ ಆಗಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ನನಗೆ 1 ಲಕ್ಷ 11 ಸಾವಿರ ಹೆಚ್ಚುವರಿ ಮತಗಳನ್ನು ಕೊಟ್ಟಿರುವಂತೆ ಈ ಚುನಾವಣೆಯಲ್ಲಿಯೂ ಸಹ ಕಳೆದ ಚುನಾವಣೆಗಿಂತ ಹೆಚ್ಚು ಮತಗಳನ್ನು ಹೆಚ್ಚೂವರಿಯಾಗಿ ಕೊಡುವ ಮೂಲಕ ಪ್ರಧಾನಿ ಮೋದಿಯವರ ಕೈ ಬಲ ಪಡಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಈ ದೇಶದ ಪವಾಡ ಪುರುಷ, 500 ವರ್ಷಗಳ ಅವಿರತ ಹೋರಾಟ, ಲಕ್ಷಾಂತರ ಕರ ಸೇವಕರ ಬಲಿದಾನ ನಡೆದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರ ಆಶಯದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದರು. ಜಾತೀಯ ವಿಷ ಬೀಜ ಬಿತ್ತುವ ಮೂಲಕ ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು, ಇದಕ್ಕೆ ಈ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು ಎಂದರು.
ಸಂಸದನಾಗಿ ಐದು ವರ್ಷಗಳ ಅವಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಅವಧಿ ಕರೋನಾ ಮತ್ತು ಪ್ರವಾಹದಂತಹ ಸಮಸ್ಯೆಗೆ ಮೀಸಲಿಡಬೇಕಾಯಿತು ಇನ್ನುಳಿದ ಅವಧಿಯಲ್ಲಿ ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಿರುವೆ ಎಂದ ಅವರು ಅಥಣಿ ಕ್ಷೇತ್ರದಲ್ಲಿ ಪಿ.ಎಮ್.ಜಿ.ಎಸ್.ವೈ ಯೋಜನೆಯಡಿ 25 ಕೋಟಿ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ, ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಸಂಸದ ನಿಧಿಯಲ್ಲಿ 2 ಕೋಟಿ 97 ಲಕ್ಷ ರೂ‌.ಅನುದಾನದಲ್ಲಿ ಅಂಬ್ಯುಲೆನ್ಸ, ಸಿಸಿ ಕ್ಯಾಮರಾ ಅಳವಡಿಕೆ, ಬಸ್ ಶೆಲ್ಟರ್, ಸಮುದಾಯ ಭವನಗಳನ್ನು ನಿರ್ಮಾಣಗೊಳಿಸಲಾಗಿದೆ ಎಂದರು.
ಅಥಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ 4480 ಕೋಟಿ ಅನುದಾನ ಮಂಜೂರು ಮಾಡಿಸಿರುವೆ.ಅಲ್ಲದೆ ಕೆ.ಎನ್.ಎನ್ ಮೂಲಕ ಝುಂಜರವಾಡದಲ್ಲಿ 1 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿ ಕೈ ಗೊಂಡಿರುವೆ ಎಂದ ಅವರು ನನ್ನ ಧರ್ಮ ಪತ್ನಿ ಶಶಿಕಲಾ ಜೊಲ್ಲೆಯವರು ತಮ್ಮೆಲ್ಲರ ಆಶೀರ್ವಾದದಿಂದ ರಾಜ್ಯ ಸರಕಾರದಲ್ಲಿ ಮುಜರಾಯಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಅಥಣಿ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.
ದೇಶದ ಮತದಾರರು ಮೋದಿ ಗ್ಯಾರಂಟಿ ಮೇಲೆ ವಿಶ್ಚಾಸ ಇಟ್ಟಿದ್ದರಿಂದ ದೇಶದಲ್ಲಿ ಮೂರನೇ ಬಾರಿಯೂ ಸಹ ನರೇಂದ್ರ ಮೋದಿಯವರೇ ಪ್ರಧಾನಿಗಳಾಗುತ್ತಾರೆ.ಇದರಲ್ಲಿ ಯಾವುದೇ ಸಂಶಯ ಬೇಡ ಎಂದ ಅವರು 10 ವರ್ಷಗಳ ಅವರ ಅವಧಿಯಲ್ಲಿ 500 ವರ್ಷಗಳಿಂದ ಸಾಧ್ಯವಾಗದ ರಾಮ ಮಂದಿರದ ನಿರ್ಮಾಣ, 75 ವರ್ಷಗಳಿಂದ ಸಾಧ್ಯವಾಗದ ಅನುಚ್ಛೇದ 370 ಕಲಂ ರದ್ದತಿ ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡ, ಅಲ್ಪ ಸಂಖ್ಯಾತ, ರೈತ, ಬಡ, ನಿರ್ಗತಿಕರ, ವಿದ್ಯಾರ್ಥಿಗಳ, ಮಹಿಳೆಯರ, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದವರ ಅನಕೂಲಕ್ಕಾಗಿ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತಿದ್ದು, ಈ ಬಾರಿಯೂ ದೇಶದಲ್ಲಿ 400 ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ ಎಂದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಭಾರತ ಎಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಭಾರತ ಮತ್ತು ಭಾರತೀಯರಾದ ನಾವು ಸುರಕ್ಷಿತರಾಗಿರುತ್ತೇವೆ. ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದ್ದಾರೆ ಎಂದ ಅವರು ಮಾಜಿ ಸಚಿವ ರಮೇಶ ಜಾರಕಿಹೊಳಿ ಸಹಕಾರದಿಂದ ಸುಮಾರು 1400 ಕೋಟಿ ಅನುದಾನದ ಅಮ್ಮಾಜೇಶ್ವರಿ ನೀರಾವರಿ ಯೋಜನೆ ನನ್ನ ಅಧಿಕಾರ ಅವಧಿಯಲ್ಲಿಯೇ ಮಂಜೂರಾಗಿದೆ. ಅಥಣಿ ಮತಕ್ಷೇತ್ರದಲ್ಲಿ ಎಲ್ಲಾ ಗ್ರಾಮಗಳಿಗೂ ರಸ್ತೆ, ಅವಶ್ಯ ಇದ್ದಲ್ಲಿ ಬಾಂದಾರ, ತಡೆಗೊಡೆಗಳನ್ನು ನಿರ್ಮಿಸಿರುವೆ ಎಂದ ಅವರು ಮೇ.7 ರಂದು ಎಲ್ಲರೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಇವರಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಉಮೇಶರಾವ ಬಂಟೋಡಕರ, ಪ್ರಭಾಕರ ಚವ್ಹಾಣ, ಅಪ್ಪಾಸಾಹೇಬ ಅವತಾಡೆ, ಸತ್ಯಪ್ಪಾ ಬಾಗೆನ್ನವರ, ಗಿರೀಶ ಬುಟಾಳಿ, ಧರೆಪ್ಪ ಠಕ್ಕಣ್ಣವರ, ರವಿ ಪೂಜಾರಿ, ಸದಾಶಿವ ಕೊಂಪಿ,ಬಸವರಾಜ ಬಾಳಿಕಾಯಿ ಸೇರಿದಂತೆ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.ಅಥಣಿ ಮಂಡಲ ಬಿಜೆಪಿ ಅಧ್ಯಕ್ಷ ಡಾ.ರವಿ ಸಂಕ ಸ್ವಾಗತಿಸಿದರು, ಶಿವ ಪ್ರಸನ್ ಹಿರೇಮಠ ನಿರೂಪಿಸಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button