
ಪ್ರಗತಿವಾಹಿನಿ ಸುದ್ದಿ : 15ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದ ಖತರ್ನಾಕ್ ಆರೋಪಿಯನ್ನು ಉತ್ತರ ಕನ್ನಡದ ಯಲ್ಲಾಪುರದಲ್ಲಿ ಪೊಲೀಸರು ಬಂದಿಸಿದ್ದಾರೆ.
ರಾಮನಗರದಲ್ಲಿ ಪಿಎಸ್ಐ ಮೇಲೆ ಹಲ್ಲೆ ಸೇರಿದಂತೆ ಅನೇಕ ಕೃತ್ಯಗಳಲ್ಲಿ ಭಾಗಿ ಆಗಿದ್ದ ಆರೋಪಿ ಪ್ರವೀಣ್ ಸುಧೀರ್ ಎಂಬಾತನನ್ನು ಯಲ್ಲಾಪುರ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಈತನ ವಿರುದ್ಧ ರಾಮನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ.
ಇದೀಗ ಆರೋಪಿಯ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕಣ್ಣಿಗೇರಿಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಪ್ರವೀಣ್ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಎಚ್ಚೆತ್ತ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಘಟನೆಯಲ್ಲಿ ಮೂವರು ಪೊಲೀಸರು ಹಾಗೂ ಓರ್ವ ಪಿಎಸ್ಐಗೆ ಗಾಯಗಳಾಗಿದ್ದು, ಸದ್ಯ ನಾಲ್ವರು ಪೊಲೀಸರು ಹಾಗೂ ಆರೋಪಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.