ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಜಿದ್ದಿಗೆ ಬಿದ್ದರೆ ಸರಕಾರವನ್ನೇ ಕೆಡವಬಲ್ಲರು, ಸರಕಾರವನ್ನು ರಚಿಸಬಲ್ಲರು. ಯಾರನ್ನಾದರೂ ಬಲಿಹಾಕಬೇಕೆಂದರೆ ಜಿದ್ದಿಗೆ ಬಿದ್ದು ಕೆಲಸ ಮಾಡುತ್ತಾರೆ. ಒಳ ಸುಳಿ ಯಾರಿಗೂ ಗೊತ್ತಾಗುವುದೇ ಇಲ್ಲ.
ಎಂ.ಕೆ.ಹೆಗಡೆ, ಬೆಳಗಾವಿ – ಬೆಳಗಾವಿ ಜಿಲ್ಲೆಯ ಬಿಜೆಪಿ ಒಳ ರಾಜಕೀಯ ಸುಳಿಗೆ ಮತ್ತೊಂದು ಬಲಿಯಾಗಿದೆ. ಎಲ್ಲ ಶಸ್ತ್ರಾಸ್ತ್ರಗಳಿದ್ದರೂ ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ ಕ್ಷೇತ್ರವನ್ನು ಆಡಳಿತ ಬಿಜೆಪಿ ಕಳೆದುಕೊಂಡಿದೆ.
ಎಸ್ಎಸ್ಎಲ್ ಸಿಯನ್ನೂ ಪಾಸ್ ಆಗದ, ಕಾಂಗ್ರೆಸ್ ಪಕ್ಷದ ಮುದಿ ಎತ್ತಿನ ಎದುರು ಬಿಜೆಪಿಯ ಯುವ, ಉತ್ಸಾಹಿ ನಾಯಕನನ್ನು ಪಕ್ಷದ ರಾಜಕಾರಣವೇ ಮಣಿಸಿ ಹಾಕಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಚುನಾವಣೆಯ ನಂತರ ಜಿಲ್ಲಾ ಬಿಜೆಪಿ ರಾಜಕಾರಣ ಈಗ ಮತ್ತೊಂದು ಬಲಿ ಹಾಕಿದೆ.
ಹಾಗೆ ನೋಡಿದರೆ ಬಿಜೆಪಿ ಕಳೆದ ಚುನಾವಣೆಯಂತೆ ಈ ಚುನಾವಣೆಯಲ್ಲೂ ಕಳೆದುಕೊಳ್ಳುವಂತ ಸ್ಥಿತಿ ಏನೇನೂ ಇರಲಿಲ್ಲ.
ಚುನಾವಣೆಗೆ ಮುನ್ನ ಸಣ್ಣ ಕೆಲಸ ಮಾಡಿದ್ದಿದ್ದರೆ ಆ ಚುನಾವಣೆಯಲ್ಲಿ ಸೋಲಬೇಕಿರಲಿಲ್ಲ.
ಆ ಚುನಾವಣೆಯಲ್ಲಾದ ತಪ್ಪನ್ನು ಸರಿಪಡಿಸಿಕೊಂಡಿದ್ದರೆ ಈ ಚುನಾವಣೆಯನ್ನು ಕಳೆದುಕೊಳ್ಳಬೇಕಿರಲಿಲ್ಲ.
ಸ್ವಯಂಕೃತ ಅಪರಾಧಕ್ಕೆ, ಜಿಲ್ಲೆಯ ಕೆಲವು ರಾಜಕಾರಣಿಗಳ ಸ್ವಾರ್ಥ, ದ್ವೇಷ, ಹುನ್ನಾರಗಳಿಂದಾಗಿ ಎರಡೂ ಚುನಾವಣೆಯನ್ನು ಬಿಜೆಪಿ ಕೈ ಚೆಲ್ಲಬೇಕಾಯಿತು.
3 ಜಿಲ್ಲೆಗಳ 33 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 22 ಶಾಸಕರನ್ನು ಹೊಂದಿದೆ. ನಾಲ್ವರು ಬಲಾಢ್ಯ ಸಚಿವರನ್ನು ಹೊಂದಿದೆ. 6 ಸಂಸದರನ್ನು ಹೊಂದಿದೆ. ಹಲವಾರು ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರನ್ನು ಹೊಂದಿದೆ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಬಿಜೆಪಿ ಕೈಯಲ್ಲಿವೆ.
ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಆದರೆ ಜಿಲ್ಲಾ ರಾಜಕಾರಣದ ಒಳ ಸುಳಿವನ್ನು ಜಾಣ ಕಿವುಡುತನ, ಜಾಣ ಕುರುಡುತನದಿಂದ ನಿರ್ಲಕ್ಷಿಸಿದ್ದರಿಂದಾಗಿ ಹಿನ್ನಡೆ ಅನುಭವಿಸಬೇಕಾಯಿತು.
ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಜಿದ್ದಿಗೆ ಬಿದ್ದರೆ ಸರಕಾರವನ್ನೇ ಕೆಡವಬಲ್ಲರು, ಸರಕಾರವನ್ನು ರಚಿಸಬಲ್ಲರು. ಯಾರನ್ನಾದರೂ ಬಲಿಹಾಕಬೇಕೆಂದರೆ ಜಿದ್ದಿಗೆ ಬಿದ್ದು ಕೆಲಸ ಮಾಡುತ್ತಾರೆ. ಒಳ ಸುಳಿ ಯಾರಿಗೂ ಗೊತ್ತಾಗುವುದೇ ಇಲ್ಲ.
ಬಿಜೆಪಿ ಸೋಲಿಗೆ ಪ್ರಮುಖ ಕಾರಣಗಳು
- ಅರುಣ ಶಹಾಪುರ ಅವರು ಕ್ಷೇತ್ರದಲ್ಲಿ ಹೆಚ್ಚು ಓಡಾಡಿಲ್ಲ ಎನ್ನುವ ಆರೋಪ. ವಾಯವ್ಯ ಶಿಕ್ಷಕರ ಕ್ಷೇತ್ರ 33 ವಿಧಾನ ಸಭೆ ಕ್ಷೇತ್ರ ವ್ಯಾಪ್ತಿ ಹೊಂದಿರುವ, 3 ಜಿಲ್ಲೆಗಳಲ್ಲಿ ಹರಡಿರುವ ದೊಡ್ಡ ಕ್ಷೇತ್ರ. ಪ್ರ್ಯಾಕ್ಟಿಕಲ್ ಆಗಿ ಹಳ್ಳಿ ಹಳ್ಳಿಗೆ ಓಡಾಡುವುದು ಅಸಾಧ್ಯ ಎನ್ನುವ ಕಲ್ಪನೆ ಶಿಕ್ಷಕರಲ್ಲಿಲ್ಲ.
- ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುವ ಮೂಲಕ ಪ್ರಕಾಶ ಹುಕ್ಕೇರಿ ಅವರು ಅನುಕಂಪ ಗಿಟ್ಟಿಸಿಕೊಂಡಿದ್ದು.
- ಪಂಚಮಸಾಲಿ- ಜಾತಿ ಟ್ರಂಪ್ ಕಾರ್ಡ್ ಕೂಡ ಪ್ರಕಾಶ ಹುಕ್ಕೇರಿಗೆ ವರವಾಯಿತು.
- ಬೆಳಗಾವಿಯವರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗು ಆರಂಭದಲ್ಲೇ ದೊಡ್ಡ ಸದ್ದು ಮಾಡಿತ್ತು.
- ಪ್ರಕಾಶ ಹುಕ್ಕೇರಿ ಮುದಿ ಎತ್ತು ಎನ್ನುವ ಮೂಲಕ ಗೋವಿಂದ ಕಾರಜೊಳ ದೊಡ್ಡಮಟ್ಟಿಗೆ ಬಿಜೆಪಿ ಹಿನ್ನಡೆಗೆ ಕಾರಣರಾದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಗೋವಿಂದ ಕಾರಜೋಳ ಏನು ಎಳೆ ಎತ್ತಾ ಎಂದು ತಿರುಗೇಟು ನೀಡಿದ್ದು ದೊಡ್ಡ ಪರಿಣಾಮ ಬೀರಿತು.
- ಕಳೆದ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ ಎನ್ನುವ ಮಹಾಂತೇಶ ಕವಟಗಿಮಠ ಅವರ ಅಸಮಾಧಾನ, ತಮ್ಮನ್ನು ಬಿಜೆಪಿಯಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆಯವರ ಅಸಮಾಧಾನ.
- ಸಂಸದ ರಮೇಶ ಜಿಗಜಿಣಗಿ ಪತ್ರಿಕಾಗೋಷ್ಠಿಯಲ್ಲಿ ಅರುಣ ಶಹಾಪುರ ಕುರಿತು ಆಡಿದ ಮಾತುಗಳು.
- ಬಿಜೆಪಿ ನಾಯಕರ ಮಧ್ಯೆ ಹಿಂದಿನ ವಿಧಾನ ಪರಿಷತ್ ಚುನಾವಣೆಯ ನಂತರ ಉಂಟಾಗಿರುವ ದೊಡ್ಡ ಬಿರುಕು… ಇತ್ಯಾದಿ.
ಈ ಚುನಾವಣೆಯ ಸೋಲು ಬಿಜೆಪಿ ಪಾಲಿಗೆ ಕೇವಲ ಒಂದು ಚುನಾವಣೆಯ ಸೋಲಲ್ಲ, ಇದು ಪಕ್ಷಕ್ಕೆ ದೊಡ್ಡ ಅವಮಾನ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿನ ಹಿನ್ನಡೆಗೂ ಕಾರಣವಾಗಬಹುದು.
ಬೆಳಗಾವಿ ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣ ಇಲ್ಲ; ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಪರಿಷತ್ ಚುನಾವಣೆ: ಹೊರಟ್ಟಿ, ಹುಕ್ಕೇರಿ, ನಿರಾಣಿ ಗೆಲುವು; ಸಮಗ್ರ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ