Belagavi NewsBelgaum NewsKannada NewsKarnataka NewsLatest

*ಆರೋಗ್ಯಪೂರ್ಣ ಜೀವನಕ್ಕೆ ಯೋಗ ದಿವ್ಯೌಷಧಿ : ಡಾ.ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ; ಅಂಕಲಿ: ಆರೋಗ್ಯಪೂರ್ಣ ಜೀವನಕ್ಕೆ ಯೋಗ ದಿವ್ಯೌಷಧಿ. ನಮ್ಮ ಸಂಸ್ಕೃತಿಯ ಬೇರುಗಳಿರುವುದು ಯೋಗದಲ್ಲಿಯೇ. ವಿಶ್ವಕ್ಕೆ ಭಾರತ ಕೊಟ್ಟ ಬಹುದೊಡ್ಡ ಕೊಡುಗೆ ಯೋಗವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.

ಅವರು ಚಿಕ್ಕೋಡಿ ತಾಲೂಕಿನ ಅಂಕಲಿಯ ಶ್ರೀಮತಿ ಶಾರದಾ ದೇವಿ ಕೋರೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.


ಯೋಗವು ಭಾರತೀಯತೆಯ ಪ್ರತಿಬಿಂಬವಾಗಿದೆ. ನಮ್ಮ ಋಷಿಮುನಿಗಳು ಯೋಗವನ್ನು ಸಂಸ್ಕೃತಿಯ ಭಾಗವಾಗಿ ನೋಡಿದರು ಆರಾಧಿಸಿದರು. ಸರ್ವ ರೋಗಗಳಿಗೂ ಯೋಗ ಒಂದು ಮಂತ್ರವೆಂದು ಗುರುತಿಸಿದರು. ಅದು ಕೇವಲ ಶಾರೀರಕ ಮಾತ್ರವಲ್ಲ ನಮ್ಮ ಮಾನಸಿಕ ಆರೋಗ್ಯದ ಬುನಾದಿಯೆಂದು ಅರಿವು ಮೂಡಿಸಿದರು. ಶತಶತಮಾನಗಳಿಂದ ನಮ್ಮ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಯೋಗವನ್ನು ಮಾನ್ಯ ಪ್ರಧಾನಿ ನರೇಂದ್ರ ಮೋದಿಜಿಯವರು ವಿಶ್ವಸಂಸ್ಥೆಯಲ್ಲಿ ಮಾನ್ಯತೆ ದೊರೆಯುವಂತೆ ಮಾಡಿರುವುದು ಒಂದು ಅಭಿಮಾನದ ಸಂಗತಿ. ಯೋಗದ ನೆಲೆಯಲ್ಲಿ ಜಗತ್ತು ಭಾರತವನ್ನು ನೋಡುವಂತೆ ಕಾಲಬದಲಾಗಿದೆ. ನಮ್ಮ ಜೀವನಕ್ರಮದಲ್ಲಿ ನಿತ್ಯ ಯೋಗವನ್ನು ವ್ರತದಂತೆ ಸ್ವೀಕರಿಸಬೇಕು. ಮಕ್ಕಳು ತಪ್ಪದೇ ಯೋಗವನ್ನು ರೂಢಿಸಿಕೊಳ್ಳಬೇಕು. ಯೋಗ ಮಾಡುವವನು ನಿರೋಗಿಯಾಗಿರುತ್ತಾನೆ. ಅದನ್ನು ಅಭ್ಯಾಸಬಲವನ್ನಾಗಿ ಮಾಡಿಕೊಂಡರೆ ಜೀವನದಲ್ಲಿ ಹತ್ತುಹಲವಾರು ಸಮಸ್ಯೆಗಳನ್ನು ಎದುರಿಸಲು ಸಾಧ್ಯ. ನಮ್ಮ ಆತ್ಮಬಲವನ್ನು ಹೆಚ್ಚಿಸುವಲ್ಲಿ ಯೋಗದ ಪಾತ್ರ ಪ್ರಧಾನವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪಂತಜಲಿ ಯೋಗ ಕೇಂದ್ರ ರಾಯಬಾಗದ ಯೋಗ ಶಿಕ್ಷಕ ಸಂಜಯ ಕುಸ್ತಿಗಾರ, ಶ್ರೀಮತಿ ಪ್ರಭಾವತಿ ಕುಸ್ತಿಗಾರ, ಭಾರತಿ ಮೋರೆ ವಿದ್ಯಾರ್ಥಿಗಳಿಗೆ ಯೋಗ ತರಬೇತಿಯನ್ನು ನೀಡಿದರು. ನಂತರ ಡಾ.ಪ್ರಭಾಕರ ಕೋರೆಯವರು ಯೋಗ ಶಿಕ್ಷಕರಿಗೆ ಗೌರವಿಸಿ ಸತ್ಕರಿಸಿದರು. ಜೆ.ಎಸ್.ತಮಗೊಂಡ ಸ್ವಾಗತಿಸಿದರು. ಬಿ.ಜಿ.ಜಾವೂರ, ಆಜೀವ ಸದಸ್ಯರಾದ ಬಿ.ಎಸ್. ಅಂಬಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button