CrimeKannada NewsLatest

*ಕದ್ದ ಬೈಕ್‌ನಲ್ಲಿ ಗೆಳತಿಯೊಂದಿಗೆ ಸುತ್ತಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವಕ*

ಪ್ರಗತಿವಾಹಿನಿ ಸುದ್ದಿ: ಕಳವು ಮಾಡಿದ್ದ ಬೈಕ್‌ನಲ್ಲಿ ತನ್ನ ಗೆಳತಿಯೊಂದಿಗೆ ಸುತ್ತಾಡುತ್ತಿದ್ದ ಯುವಕನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕೇರಳದ ಚೆರುವತ್ತೂರಿನಲ್ಲಿ ನಡೆದಿದೆ. 

ಪೊಲೀಸ್ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಚುರುಕಿನ ಕಾರ್ಯಾಚರಣೆಯಿಂದ ಕಳವಾಗಿದ್ದ ಬೈಕ್ ಪತ್ತೆಯಾಗಿದ್ದು, ಯುವಕನನ್ನು ವಶಕ್ಕೆ ಪಡೆಯಲಾಗಿದೆ. ರಾತ್ರಿ ವೇಳೆ ಕೊಟ್ಟಣಚ್ಚೇರಿ ದೇವಸ್ಥಾನದ ಸಮೀಪ ಬೈಕ್‌ನಲ್ಲಿ ಬಂದಿದ್ದ ಯುವಕನೊಬ್ಬ, ಕಾಸರಗೋಡು ಎಆರ್ ಕ್ಯಾಂಪ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುನೀಶ್ ಅವರ ಬಳಿ ಕಾಂಞಂಗಾಡ್‌ಗೆ ತೆರಳುವ ಮಾರ್ಗ ಹಾಗೂ ದೂರದ ಬಗ್ಗೆ ಹಿಂದಿಯಲ್ಲಿ ವಿಚಾರಿಸಿದ್ದಾನೆ. 

ಈ ವೇಳೆ ಬೈಕ್‌ನ ನೋಂದಣಿ ಸಂಖ್ಯೆ ಮತ್ತು ಯುವಕನ ವರ್ತನೆ ಗಮನಿಸಿದ ಸುನೀಶ್ ಅವರಿಗೆ ಅನುಮಾನ ಮೂಡಿದೆ. ಯುವಕ ಅಲ್ಲಿಂದ ತೆರಳುತ್ತಿದ್ದಂತೆ ಎಚ್ಚೆತ್ತುಕೊಂಡ ಸುನೀಶ್, ತಕ್ಷಣ ಕಾಸರಗೋಡು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಬೈಕ್‌ನ ನೋಂದಣಿ ಸಂಖ್ಯೆಯನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ. 

ಪೊಲೀಸರ ಪರಿಶೀಲನೆ ವೇಳೆ ಬೈಕ್ ಎರಡು ದಿನಗಳ ಹಿಂದೆ ವಡಕರದಿಂದ ಕಳವಾಗಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಸುನೀಶ್ ತಮ್ಮ ಬೈಕ್‌ನಲ್ಲಿ ಯುವಕನನ್ನು ಬೆನ್ನಟ್ಟಿದ್ದಾರೆ. ಕೊನೆಗೆ ಚೆರುವತ್ತೂರಿನಲ್ಲಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಕಳವಾಗಿದ್ದ ಬೈಕ್ ಪತ್ತೆಯಾಗುವುದರ ಜತೆಗೆ ಶಂಕಿತ ಯುವಕನೂ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ. ಚಂದೇರ ಪೊಲೀಸರು ಬೈಕ್ ಮತ್ತು ಯುವಕನನ್ನು ವಶಕ್ಕೆ ಪಡೆದು ವಡಕರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. 

ವಿಚಾರಣೆ ವೇಳೆ ಬೇರೊಬ್ಬರಿಂದ ಬೈಕ್ ಪಡೆದುಕೊಂಡಿರುವುದಾಗಿ ಯುವಕ ಹೇಳಿದ್ದಾನೆ. ಆತ ನೀಡಿರುವ ಹೇಳಿಕೆಯ ಸತ್ಯಾಸತ್ಯತೆ ಹಾಗೂ ಬೈಕ್ ಕಳವು ಪ್ರಕರಣದಲ್ಲಿ ಆತನ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button