
ಪ್ರಗತಿವಾಹಿನಿ ಸುದ್ದಿ: ಪೋಷಕರು ಮದುವೆ ಮಾಡಬಹುದು ಎನ್ನುವ ಭಯಕ್ಕೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗಾರ್ಲದಿನ್ನೆ ಮಂಡಲದ ಮರ್ತಾದ್ ಗ್ರಾಮದ ರೂಪಕೀರ್ತನಾ (17) ಮೃತಪಟ್ಟ ದುರ್ದೈವಿ. ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಬೆಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಈಕೆ ಇತ್ತೀಚೆಗಷ್ಟೇ ಪಿಯುಸಿ ಮೊದಲ ವರ್ಷ ಪರೀಕ್ಷೆ ಮುಗಿಸಿದ್ದು, ಸದ್ಯ ಬೇಸಿಗೆ ರಜೆಯಲ್ಲಿದ್ದಳು. ಈ ವೇಳೆ ಪೋಷಕರು ಮನೆಯಲ್ಲಿ, ಮಗಳಿಗೆ ಯಾವುದಾದರೂ ಒಳ್ಳೆ ಸಂಬಂಧ ಬಂದರೆ ಮದುವೆ ಮಾಡೋಣ ಎಂದು ಚರ್ಚೆ ಮಾಡಿಕೊಳ್ಳುತ್ತಿದ್ದರು.
ಹೆತ್ತವರ ಮಾತನ್ನು ಕೇಳಿದ ರೂಪಕೀರ್ತನಾ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ನನಗೆ ಈಗಲೇ ಮದುವೆ ಬೇಡ, ನಾನು ಓದಬೇಕು ಎಂದು ಹೇಳಿದ್ದಾಳೆ. ಪೋಷಕರು ಚರ್ಚೆ ಮಾಡಿದ್ದರಷ್ಟೇ ಹೊರತು, ಮದುವೆ ನಿಶ್ಚಯಿಸಿರಲಿಲ್ಲ ಅಥವಾ ಆಕೆಯನ್ನು ಬಲವಂತಪಡಿಸಿರಲಿಲ್ಲ. ಎಲ್ಲಿ ಪೋಷಕರು ತನಗೆ ಬಲವಂತವಾಗಿ ಮದುವೆ ಮಾಡಿಬಿಡುತ್ತಾರೋ ಎಂಬ ವಿಪರೀತ ಭಯ ಆಕೆಯನ್ನು ಕಾಡಿದೆ. ಇದೇ ಆತಂಕದಲ್ಲಿ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
