CrimeKannada NewsKarnataka News

*ವಿವಾಹಿತ ಆಟೋ ಡ್ರೈವರ್‌ ಹಿಂದೆ ಬಿದ್ದು ಮಸಣ ಸೇರಿದ ಯುವತಿ*

ಪ್ರಗತಿವಾಹಿನಿ ಸುದ್ದಿ: ವಿವಾಹಿತ ಆಟೋ ಚಾಲಕನ ಮಾತು ನಂಬಿದ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ದುರಂತ ಬೆಳಕಿಗೆ ಬಂದಿದೆ. “ನಾವಿಬ್ಬರೂ ಜೊತೆಯಾಗಿಯೇ ಸಾಯೋಣ” ಎಂದು ಇಬ್ಬರೂ ವಿಷ ಕುಡಿಯುವ ನಾಟಕವಾಡಿ ಇದೀಗ ಯುವತಿ ವಿಷ ಕುಡಿಯುತ್ತಿದ್ದಂತೆ ಪ್ರಿಯಕರ ಅಲ್ಲಿಂದ ಎಸ್ಕೆಪ್ ಆಗಿದ್ದಾನೆ.

ಮಾಗಡಿ ಮೂಲದ 22 ವರ್ಷದ ಭವಾನಿ ಮೃತ ದುರ್ದೈವಿ. ಕಳೆದ ಎರಡು ವರ್ಷಗಳ ಹಿಂದೆ ಮೊಬೈಲ್ ಅಂಗಡಿಯೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಾ ಬಾಡಿಗೆ ಮನೆಯಲ್ಲಿ ಸ್ವತಂತ್ರವಾಗಿ ವಾಸವಿದ್ದಳು. ಮಗಳ ಭವಿಷ್ಯದ ಬಗ್ಗೆ ಯೋಚಿಸಿದ್ದ ಪೋಷಕರು ಇತ್ತೀಚೆಗಷ್ಟೇ ಆಕೆಗೆ ಮದುವೆ ನಿಶ್ಚಯಿಸುವ ಬಗ್ಗೆ ಮಾತನಾಡಿದ್ದರು. ಹೆತ್ತವರ ಆಸೆಯಂತೆ ಭವಾನಿ ಕೂಡ ಮದುವೆಗೆ ಒಪ್ಪಿಗೆ ನೀಡದಳು.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಭವಾನಿಗೆ ಆಟೋ ಚಾಲಕನೊಬ್ಬನ ಪರಿಚಯವಾಗಿ, ಅದು ಪ್ರೇಮಾಂಕುರವಾಗಿತ್ತು. ಆತನಿಗೆ ಈಗಾಗಲೇ ಮದುವೆಯಾಗಿದೆ ಎಂಬ ಸತ್ಯ ತಿಳಿಯದ ಯುವತಿ, ಆತನೊಂದಿಗೆ ಲಿವಿಂಗ್ ಟುಗೆದರ್ ಮಾದರಿಯಲ್ಲಿ ಒಟ್ಟಿಗೆ ಜೀವನ ನಡೆಸುತ್ತಿದ್ದಳು.

ಆಟೋ ಚಾಲಕ ಕೂಡ ತಾನೇ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಗಾಗ ಮನೆಗೆ ಬಂದು ಹೋಗುತ್ತಿದ್ದನು. ಆದರೆ ಕೆಲವು ದಿನಗಳ ನಂತರ ಆತನಿಗೆ ಈಗಾಗಲೇ ಮದುವೆಯಾಗಿ ಒಂದು ಗಂಡು ಮಗನೂ ಇದ್ದಾನೆ ಎಂಬ ಕಹಿ ಸತ್ಯ ಭವಾನಿಗೆ ಗೊತ್ತಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ತೀವ್ರ ಆತಂಕಕ್ಕೆ ಒಳಗಾದ ಯುವತಿ, ಈಗಾಗಲೇ ಮದುವೆಯಾಗಿರುವ ವ್ಯಕ್ತಿಯೊಂದಿಗೆ ತನ್ನ ಪ್ರೀತಿಯನ್ನು ಮನೆಯವರು ಒಪ್ಪುವುದಿಲ್ಲ ಎಂಬ ಭಯಕ್ಕೆ ಬಿದ್ದಿದ್ದಳು. ಇದೇ ಕಾರಣಕ್ಕೆ ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಳು.

ಆದರೆ, ಮದುವೆಯಾಗಿರುವ ಆಟೋ ಅಂಕಲ್‌ನನ್ನು ಬಿಟ್ಟಿರಲಾಗದೇ, ಇನ್ನೊಂದೆಡೆ ಹೆತ್ತವರಿಗೆ ಮುಖ ತೋರಿಸಲಾಗದೆ ತೀವ್ರ ಮಾನಸಿಕ ಸಂಕಟ ಅನುಭವಿಸುತ್ತಿದ್ದಳು. ಇದೇ ಸಮಯ ಸಾಧಿಸಿ ಭವಾನಿ ಮನೆಗೆ ಬಂದ ಆಟೋ ಡ್ರೈವರ್, “ನಾವಿಬ್ಬರೂ ಒಟ್ಟಾಗಿ ಸಾಯೋಣ” ಎಂದು ಆಕೆಯ ಮನವೊಲಿಸಿ ವಿಷ ಕುಡಿಯಲು ಪ್ಲಾನ್ ಮಾಡಿದ್ದಾನೆ.

ಯುವತಿಯನ್ನು ಸಂಪೂರ್ಣವಾಗಿ ನಂಬಿಸಿದ ಆಟೋ ಚಾಲಕ ಮನೆಯಲ್ಲೇ ವಿಷದ ಬಾಟಲಿ ಇಟ್ಟುಕೊಂಡು ಸಾಯುವ ನಾಟಕವಾಡಿದ್ದಾನೆ. ಭವಾನಿ ಸಂಪೂರ್ಣವಾಗಿ ವಿಷ ಸೇವಿಸುತ್ತಿದ್ದಂತೆ, ಈತ ಮಾತ್ರ ತಾನು ಸ್ವಲ್ಪ ವಿಷ ಕುಡಿದಂತೆ ನಟಿಸಿ ಉಳಿದ ವಿಷವನ್ನು ತನ್ನ ಬಾಯಿ ಹಾಗೂ ಮುಖದ ಮೇಲೆ ಚೆಲ್ಲಿಕೊಂಡಿದ್ದಾನೆ.

ಅಷ್ಟರಲ್ಲೇ ತನಗೆ ಹೆಂಡತಿ-ಮಕ್ಕಳಿದ್ದಾರೆ, ತಾನು ಸಾಯಬಾರದು ಆದರೆ ಯುವತಿ ಮಾತ್ರ ಸಾಯಬೇಕು ಎಂಬ ಕ್ರೂರ ಆಲೋಚನೆ ಆತನಿಗೆ ಬಂದಿದೆ ಎನ್ನಲಾಗಿದೆ. ವಿಷ ಸೇವಿಸಿ ಒದಾಡುತ್ತಿದ್ದ ಯುವತಿಯ ಕತ್ತನ್ನು ಆತ ಹಿಸುಕಿದ್ದಾನೆ ಎಂಬ ಗಂಭೀರ ಶಂಕೆ ವ್ಯಕ್ತವಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button