ಕಳಪೆ ಸೈಕಲ್ ವಿತರಣೆ -ಆರೋಪ:
ಅಕ್ರಮವಾಗಿದ್ದರೆ ಕ್ರಿಮಿನಲ್ ಕೇಸ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಡಿಡಿಪಿಐ ಅವರು ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಸೈಕಲ್‌ಗಳನ್ನು ಪರಿಶೀಲನೆ ಮಾಡದೇ ವಿತರಣೆ ಮಾಡಿದ್ದಾರೆ ಎಂದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಗೋರಲ್ ಆರೋಪಿಸಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ (ಆ.೩೧) ರಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ವಿತರಣೆ ಮಾಡಿದ ಆ ಸೈಕಲ್‌ಗಳ ಟೈರ್ ಸರಿಯಿಲ್ಲ, ಪೆಡಲ್ ಗಳು ಮುರಿದಿವೆ ನಿಯಮ ಉಲ್ಲಂಘಿಸಿ ಸೈಕಲ್ ವಿತರಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ನಡೆಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ ಸಿ.ಇ.ಒ ಮಾತನಾಡಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸಲಾದ ಸೈಕಲ್‌ಗಳು ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷೆ ಮಾಡಲು ಒಂದು ತಾಂತ್ರಿಕ ಸಮಿತಿಯನ್ನು ರಚನೆ ಮಾಡಲಾಗಿದ್ದು, ಆ ಸಮಿತಿಯು ಸೈಕಲ್‌ಗಳನ್ನು ಸರಿಯಾಗಿ ಪರೀಕ್ಷಿಸಿ ವಿತರಿಸಬೇಕು. ಸೈಕಲ್ ವಿತರಣೆಯಲ್ಲಿ ಏನಾದ್ರೂ ಅಕ್ರಮವಾಗಿದ್ದರೆ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಈ ಸಂಬಂಧ ಅಧ್ಯಕ್ಷರು ಒಂದು ಸಮಿತಿ ರಚನೆ ಮಾಡಲಿದ್ದು ಆ ಸಮಿತಿ ಸದಸ್ಯರು ಎಲ್ಲೆಲ್ಲಿ ಸೈಕಲ್ ವಿತರಣೆ ಮಾಡಲಾಗುತ್ತದೆ ಅಲ್ಲೆಲ್ಲ ತೆರಳಿ ಎರಡು ವಾರದಲ್ಲಿ ವರದಿ ನೀಡುವಂತೆ ಸೂಚಿಸಿದರು.
ಮನೆ ಕಳೆದುಕೊಂಡ ಕುಟುಂಬಗಳಿಗೆ ತಕ್ಷಣವೇ ಪರಿಹಾರ
ಜಿಲ್ಲೆಯ ೧೪ ತಾಲ್ಲೂಕುಗಳಲ್ಲಿ ಪ್ರವಾಹದಿಂದ ಬಾರಿ ಪ್ರಮಾಣ ಹಾನಿಯಾಗಿರುವುದರಿಂದ ಸಣ್ಣ ಪುಟ್ಟ ಹಾನಿಯಾದ ಮನೆಗಳಿಗೆ ೨೫ ಸಾವಿರ, ಶೇ. ೫೦ ರಷ್ಟು ಹಾನಿಯಾದರೆ ರೂ. ೧ ಲಕ್ಷ, ಹಾಗೂ ಸಂಪೂರ್ಣ ಹಾನಿಯಾದ ಮನೆಗಳಿಗೆ ರೂ. ೫ ಲಕ್ಷ ನೀಡಲಾಗುತ್ತದೆ.
ಈಗಾಗಲೇ ಅಧಿಕಾರಿಗಳು ಸಮೀಕ್ಷೆ ಮಾಡುತ್ತಿದ್ದು ನಿಜವಾದ ಸಂತ್ರಸ್ತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಆದಷ್ಟು ಬೇಗ ನೀಡಲಾಗುತ್ತದೆ ಎಂದು ಜಿಲ್ಲಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.
ಗ್ರಾಮ ಪಂಚಾಯತ ಸದಸ್ಯರು, ಪಿ.ಡಿ.ಒ, ಗ್ರಾಮ ಲೆಕ್ಕಾಧಿಕಾರಿ ಹಾಗೂ ಒಬ್ಬ ಇಂಜಿನಿಯರ್ ಸೇರಿದಂತೆ ಕಂದಾಯ ಇಲಾಖೆ ಹಾಗೂ ವಸತಿ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ಕಾರ್ಯ ನಿರ್ವಹಿಸುತ್ತಿದ್ದಾರೆ ಆದಷ್ಟು ಬೇಗನೆ ಸರ್ವೆ ಮುಗಿಸಿ ಪರಿಹಾರ ನೀಡುವುದಾಗಿ ಹೇಳಿದರು.
ಶಾಲಾ ಕಟ್ಟಡಗಳು ನೆಲಕಚ್ಚುತ್ತಿವೆ
ಪ್ರವಾಹದಲ್ಲಿ ಮುಳುಗಡೆ ಆಗಿರುವ ಗ್ರಾಮಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವುದನ್ನು ಸರ್ಕಾರದ ಹಂತದಲ್ಲಿ ನಿರ್ಧರಿಸಬೇಕಾಗುತ್ತದೆ. ಪರಿಹಾರ ಕಾರ್ಯ ಮುಗಿದ ಬಳಿಕ ಸರ್ಕಾರದ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿ.ಪಂ ಸದಸ್ಯ ಮಾತನಾಡಿ ಜುನವಾಡದಿಂದ ಬ್ಯಾರೇಜ್ ನಡುವಿನ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ವಿದ್ಯಾರ್ಥಿಗಳು ಶಾಲೆಗೆ ಹೊಗುವದಕ್ಕೆ ತೊಂದರೆಯಾಗುತ್ತದೆ ಮತ್ತು ಪ್ರವಾಹದಲ್ಲಿ ನೆನೆದ ಶಾಲಾ ಕಟ್ಟಡಗಳು ಇತ್ತೀಚೆಗೆ ನೆಲಕಚ್ಚುತ್ತಿವೆ ಇದರಿಂದ ವಿದ್ಯಾರ್ಥಿಗಳು ಶಾಲೆಗಳಿಗೆ ಹೊಗಲು ಭಯಪಡುತ್ತಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸಿ.ಇ.ಒ ಅವರು ಸಂಬಂದಪಟ್ಟ ರಸ್ತೆಗಳನ್ನು ಆದಷ್ಟು ಬೇಗ ಮರು ನಿರ್ಮಾಣ ಮಾಡಬೇಕು. ಶಿಥಿಲಗೊಂಡಂತಹ ಶಾಲಾ ಕಟ್ಟಡಗಳನ್ನು ರೂ. ೨ ಲಕ್ಷ ಅನುದಾನದಲ್ಲಿ ದುರಸ್ತಿಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಶಾಲಾ ಕಟ್ಟಡ ಅತಿಯಾಗಿ ಹಾಳಾಗಿ ಹೋಗಿರುವ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಬಾಡಿಗೆ ಕಟ್ಟಡಗಳನ್ನು ತೆಗೆದುಕೊಂಡು ಶಾಲೆಗಳನ್ನು ಪ್ರಾರಂಭಿಸಬೇಕು ಎಂದರು.
ಮರಣೋತ್ತರ ಪರೀಕ್ಷೆಯ ವರದಿ ನಿಗೂಢ
ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇದ್ದಲ್ಲಿ ಮೇವು ಒದಗಿಸುವ ಕಾರ್ಯ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ ಸದಸ್ಯ ಸಿದ್ದಪ್ಪ ಮುದಕನ್ನವರ ಅವರು ಮಾತನಾಡಿ, ಅಥಣಿಯಲ್ಲಿ ವಿದ್ಯುತ್ ಅವಘಡ ದಿಂದ ನೀರಲ್ಲಿ ಬಿದ್ದು ಸಾವನ್ನಪ್ಪಿರುವ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿ ಇದುವರೆಗೂ ನಿಗೂಢವಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವ್ಹಿ, ಪ್ರವಾಹದಲ್ಲಿ ದುರ್ಮರಣ ಹೊಂದಿರುವ ವ್ಯಕ್ತಿಗಳ ಕುಟುಂಬಸ್ಥರಿಗೆ ಮಾನವೀಯ ದೃಷ್ಟಿಯಿಂದ ೨೪ ಗಂಟೆಗಳಲ್ಲಿ ಐದು ಲಕ್ಷ ರೂಪಾಯಿ ಚೆಕ್ ನೀಡುವಂತೆ ಸರ್ಕಾರದ ಆದೇಶವಿದೆ. ಮರಣೋತ್ತರ ವರದಿ ತರಿಸಿದರೆ ಶೀಘ್ರವೇ ಅವರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಪ್ರವಾಹದಿಂದ ೨ಲಕ್ಷ ೭೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎನ್.ಡಿ.ಆರ್.ಎಫ್ ನೀಡುವ ಪರಿಹಾರ ಹಣ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಪರಿಹಾರ ಹಣ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಅನೇಕ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
ಈ ಸಂಬಂಧ ರಾಜ್ಯ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಜನಪ್ರತಿನಿಧಿಗಳಿಗೂ ಕೂಡ ಮನವರಿಕೆಯಾಗಿದ್ದು, ಎನ್.ಡಿ.ಆರ್.ಎಫ್ ಪರಿಹಾರ ಹೆಚ್ಚಿಸುವ ಸಂಬಂಧ ಪ್ರಯತ್ನಿಸಲಾಗುತ್ತದೆ ಎಂದು ಸಿಇಓ ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ್ ಕಟಾಂಬಳೆ, ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ