Latest

ಕಟ್ಟಡ ಕುಸಿತ ಪ್ರಕರಣ ನಿಷ್ಪಕ್ಷಪಾತ ತನಿಖೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಸರ್ಕಾರದ ಮುಖ್ಯಕಾರ್ಯದರ್ಶಿಗಳು ಪರಿಹಾರ ಘೋಷಿಸುವರು

ಪ್ರಗತಿವಾಹಿನಿ ಸುದ್ದಿ,  ಧಾರವಾಡ:

ಧಾರವಾಡ ಕುಮಾರೇಶ್ವರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡ  ಕುಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ಆರಂಭಿಸಿ ಇದುವರೆಗೆ 54 ಜನರ ಜೀವ ರಕ್ಷಣೆ ಮಾಡಲಾಗಿದೆ. 12 ಜನ ಮೃತಪಟ್ಟಿದ್ದಾರೆ. ಅವಶೇಷಗಳಡಿ ಇನ್ನೂ ಸುಮಾರು 14 ಜನ ಇರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರೆಯಲಿದೆ. ಘಟನೆ ಕುರಿತು ಮ್ಯಾಜಿಸ್ಟ್ರೇಟ್ ಹಂತದ ತನಿಖೆ ನಡೆಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಉನ್ನತ ತನಿಖೆಗೂ ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು, ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರ ಬಂಧುಗಳೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿ ನಡೆದ ಈ ಘಟನೆ ಆಘಾತಕಾರಿಯಾಗಿದೆ. ಸಂಭವಿಸಿದ ತಕ್ಷಣ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸುವ ಅಧಿಕಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ.

Home add -Advt

ಮಹಾನಗರ ಪಾಲಿಕೆಯಿಂದ ಎಷ್ಟು ಅಂತಸ್ತಿನ ಕಟ್ಟಡದ ಪರವಾನಿಗೆ ಪಡೆಯಲಾಗಿತ್ತು ಎಂಬುದು ಹಾಗೂ ಅದನ್ನು ಮೀರಿ ಕಟ್ಟಡ ನಿರ್ಮಿಸಿದ್ದರೆ ಹಾಗೂ ಕಟ್ಟಡದ ಭದ್ರತೆ ಪರಿಶೀಲಿಸಿ ನಿರಾಕ್ಷೆಪಣಾ ಪತ್ರ ನೀಡಿದ ಕ್ರಮವನ್ನು ತನಿಖೆಗೆ ಸೂಚಿಸಲಾಗಿದೆ. ಕಾನೂನು ಬಾಹಿರವಾಗಿ ಕಳಪೆ ಕಾಮಗಾರಿ ಮಾಡಿದವರಿಗೆ ಸರ್ಕಾರದ ಅಧಿಕಾರಿಗಳು, ಇಂಜಿನೀಯರ್‌ಗಳು ಪರವಾನಿಗೆ ನೀಡಿದ್ದರೆ ಆ ಕುರಿತು ಕೂಡಾ ಸಮಗ್ರ ತನಿಖೆ ನಡೆಸಲಾಗುವುದು ಎಂದರು.

ನವಲಗುಂದ ತಾಲೂಕಿನ ಜಾವೂರ ಗ್ರಾಮದ ಸಿದ್ದಪ್ಪ ಎಂಬ ಅಗ್ನಿಶಾಮಕ ಸೇವೆಯ ಇಲಾಖೆಯ ಸಿಬ್ಬಂದಿ ಜೀವದ ಹಂಗು ತೊರೆದು, ಕುಸಿದ ಕಟ್ಟಡದ ಒಳನುಗ್ಗಿ ಸುಮಾರು ಎಂಟು ಜನರ ಪ್ರಾಣವನ್ನು ರಕ್ಷಿಸಿದ್ದಾರೆ. ಪೊಲೀಸ್ ಮತ್ತು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗಳ ಅನೇಕ ಸಿಬ್ಬಂದಿ ಪ್ರಾಮಾಣಿಕವಾಗಿ ಸೇವೆ ಮಾಡಿದ್ದಾರೆ. ಇಂತಹ ಶೌರ್ಯ, ಸಾಹಸಿಗಳನ್ನು ಒಳಗೊಂಡು ಎನ್‌ಡಿಆರಎಫ್ ಮಾದರಿಯಲ್ಲಿ ರಾಜ್ಯದ ೪ ಕಂದಾಯ ವಿಭಾಗಗಳಲ್ಲಿ ಎಸ್‌ಡಿಆರ್‌ಎಫ್ ತಂಡಗಳನ್ನು ರಚಿಸಲು ಉದ್ದೆಶಿಸಲಾಗಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಡಿಜಿಪಿ ಎಂ.ಎನ್. ರೆಡ್ಡಿ ಅವರಿಗೆ ಸೂಚಿಸಲಾಗಿದೆ.

ಧಾರವಾಡದ ದುರ್ಘಟನೆ ತೀವ್ರ ನೋವು ತಂದಿದೆ. ಕುಟುಂಬದ ದುಡಿಮೆಯ ಆಧಾರವಾಗಿದ್ದ ವ್ಯಕ್ತಿಗಳನ್ನೆ ಹಲವಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಈ ಘಟನೆಯಲ್ಲಿ ಕಳೆದುಕೊಂಡಿವೆ. ಈ ಬಗ್ಗೆ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ಬಳಿಕ ವಿವಿಧ ಇಲಾಖೆಗಳ ಮುಖ್ಯಸ್ಥರ ಉನ್ನತ ಮಟ್ಟದ ಸಭೆ ಕರೆದು ಮುಂದಿನ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು.

ಈ ಘಟನೆಯ ನಂತರ ಕಟ್ಟಡ ಪರವಾನಿಗೆ ನೀಡುವಲ್ಲಿ ಆಗಿರುವ ಅಕ್ರಮಗಳ ಕುರಿತು ಎಲ್ಲ ಕಡೆಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ. ಧಾರವಾಡದ ಈ ಕಟ್ಟಡ ಕುಸಿತಗೊಂಡ ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿ, ತ್ವರಿತ ಪರಿಹಾರ ಕಾರ್ಯಗಳನ್ನು ಪ್ರಾರಂಭಿಸಲು ಸೂಚಿಸಲಾಯಿತು. ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಜಿಲ್ಲಾಧಿಕಾರಿಗಳು, ಪೊಲೀಸ್‌ರು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಯೋಚಿತ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ದುರ್ಘಟನೆ ನಡೆದ ದಿನದಿಂದಲೂ ಘಾಜಿಯಾಬಾದ್ NDRF ನ 72 , ಬೆಂಗಳೂರು NDRF 40, SDRF – 40, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 240, BSF 120 , ವಿವಿಧ ಪೊಲೀಸ್ ಮತ್ತು RTO ಸುಮಾರು 800 , ಸ್ವಯಂ ಸೇವಕರು 100 ಕ್ಕೂ ಹೆಚ್ಚು, PWD ಯ 12 ತಜ್ಞ ಇಂಜಿನಿಯರ್ ಗಳು, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 120 ಕ್ಕೂ ಹೆಚ್ಚು ಸಿಬ್ಬಂದಿ, ಕಂದಾಯ -60, ಗೃಹರಕ್ಷಕ ದಳ -80, ಆರೋಗ್ಯ ಇಲಾಖೆಯ 150 ಕ್ಕೂ ಹೆಚ್ಚು, ಅಂಬ್ಯುಲೆನ್ಸ್ – 30 ರಿಂದ 40, JCB 10, ಕ್ರೇನ್ – 6 ಕಾರ್ಯಾಚರಣೆಯಲ್ಲಿ ನಿರತವಾಗಿವೆ ಎಂದರು.

ಜಿಲ್ಲಾ ಆಸ್ಪತ್ರೆ ಮತ್ತು ಸತ್ತೂರಿನ ಎಸ್.ಡಿ‌.ಎಂ.ಆಸ್ಪತ್ರೆಗೆ ತೆರಳಿಗೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಪೌರಾಡಳಿತ ಸಚಿವರಾದ ಸಿ.ಎಸ್.ಶಿವಳ್ಳಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್.ಕೋನರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ಪ್ರಸಾದ ಅಬ್ಬಯ್ಯ , ಪೊಲೀಸ್ ಮಹಾ ನಿರ್ದೇಶಕ ಎಂ.ಎನ್.ರೆಡ್ಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಜಿಲ್ಲಾಧಿಕಾರಿ ದೀಪಾ ಚೋಳನ್ , ಅಗ್ನಿಶಾಮಕದಳ ಮತ್ತು ತುರ್ತು ಸೇವೆಗಳ ಡಿಐಜಿ ರವಿಕಾಂತೇಗೌಡ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಹೆಚ್.ಬಿ.ದಿನೇಶ ಮತ್ತಿತರರು ಇದ್ದರು.

Related Articles

Back to top button