Latest

ಕರ್ನಾಟಕದಲ್ಲಿ  ಹೂಡಿಕೆಗೆ ಜಪಾನ್‍ನ  ಆಸಕ್ತಿ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ನವದೆಹಲಿಯಲ್ಲಿರುವ ಜಪಾನ್‍ನ ರಾಯಭಾರಿ ಕೆಂಜಿ ಹಿರಾಮತ್ಸು ಅವರ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿತು. 
ಬೆಂಗಳೂರಿನ ಫೆರಿಫೆರಲ್ ರಿಂಗ್ ರೋಡ್, ಎಲಿವೇಟೆಡ್ ಕಾರಿಡಾರ್ ಹಾಗೂ ಮೆಟ್ರೋ ಯೋಜನೆಗಳ ಅನುಷ್ಠಾನ ಹಾಗೂ ನಿರ್ವಹಣೆಯ ಬಗ್ಗೆ ಆಸಕ್ತಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ ರಾಯಭಾರಿಗಳು ಬೆಂಗಳೂರಿನಲ್ಲಿ ಜಪಾನಿನ ಅನೇಕ  ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು , ಇಲ್ಲಿನ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ  ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಸರ್ಕಾರ ತುಮಕೂರಿನ ವಸಂತ ನರಸಾಪುರದಲ್ಲಿ ಅಭಿವೃದ್ಧಿಪಡಿಸುತ್ತಿರುವ ಜಪಾನಿ ಕೈಗಾರಿಕಾ ಪ್ರದೇಶದಲ್ಲಿ ಜಪಾನಿನ ವಿವಿಧ ಕಂಪನಿಗಳು ಹೂಡಿಕೆ ಮಾಡಲು ಉತ್ಸುಕವಾಗಿದೆ ಎಂದರು.  
ರಾಜ್ಯ ಸರ್ಕಾರದ ಅನೇಕ ಪ್ರಗತಿ ಯೋಜನೆಗಳಲ್ಲಿ ಜಪಾನ್‍ನ ಸಹಭಾಗಿತ್ವವಿದೆ ಎಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, “ ತುಮಕೂರಿನಲ್ಲಿ ಜಪಾನಿ ಕೈಗಾರಿಕಾ ಪ್ರದೇಶಕ್ಕಾಗಿ 519.55 ಎಕರೆ ಪ್ರದೇಶವನ್ನು ಮೀಸಲಿಟ್ಟಿದ್ದು, ಇಲ್ಲ್ಲಿ  ತಲೆ ಎತ್ತಲಿರುವ ಈ ಕೈಗಾರಿಕಾ ನಗರ ,ಚೆನ್ನೈ -ಬೆಂಗಳೂರು ಕೈಗಾರಿಕಾ ಕಾರಿಡಾರಿನ ಪ್ರಮುಖ ಭಾಗವಾಗಲಿದೆ”, ಎಂದರು. 
  “ಇಲ್ಲಿ ಭಾರಿ ಇಂಜಿನಿಯರಿಂಗ್ ಮತ್ತು ಯಂತ್ರೋಪಕರಣಗಳು, ಆಟೋಮೇಟಿವ್ ಮತ್ತು ಆಟೋ ಬಿಡಿಭಾಗಗಳು ಹಾಗೂ ಏರೋಸ್ಪೇಸ್ ಬಿಡಿಭಾಗಗಳನ್ನು ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲಾಗುವುದು. ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಾದ ಕಾಂಕ್ರೀಟ್ ರಸ್ತೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ನೀರು ಸಂಸ್ಕರಣಾ ಘಟಕ, ವಿದ್ಯುತ್ ಉಪಕೇಂದ್ರ ಸ್ಥಾಪನೆ,ನೀರು ಸರಬರಾಜು ಮುಂತಾದ ಕಾಮಗಾರಿಗಳು ಪ್ರಗತಿಯಲ್ಲಿವೆ, ” ಎಂದು ಅವರು ಈ  ಸಂದರ್ಭದಲ್ಲಿ ತಿಳಿಸಿದರು. 
ಸಭೆಯಲ್ಲಿ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್, ಜಪಾನ್ ರಾಯಭಾರಿ ಕಚೇರಿಯ ಪ್ರಥಮ ಕಾರ್ಯದರ್ಶಿ ಉತೇಕ್ , ಬೆಂಗಳೂರಿನಲ್ಲಿರುವ ಜಪಾನಿನ ಕೌನ್ಸಲ್ ಜನರಲ್ ತಕಯುಕಿ ಕಿತಗಾವ , ವೈಸ್ ಕೌನ್ಸಲ್ ಮಿತ್ಸುಹಿರೊ ಅಮಾವ್ , ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಡಾ||ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಬಿಡಬ್ಲ್ಯೂಎಸ್‍ಎಸ್‍ಬಿ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button