ಪ್ರಗತಿವಾಹಿನಿ ಸುದ್ದಿ, ಗೋಕಾಕ
ಕೌಜಲಗಿ ಮತ್ತು ಸುತ್ತಲಿನ ಗ್ರಾಮಗಳ ರೈತರ ಬಹುನಿರೀಕ್ಷಿತ ಬೇಡಿಕೆಯಾಗಿದ್ದ 170 ಕೋಟಿ ರೂ. ಅಂದಾಜು ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಯೋಜನೆಗೆ ಶುಕ್ರವಾರ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಸರಕಾರ ಅನುಮೋದನೆ ನೀಡಲಿದೆ ಎಂಬ ವಿಶ್ವಾಸವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ರೈತರಿಗೆ ಭರವಸೆ ನೀಡಿದಂತೆ ೧೭೦ ಕೋಟಿ ರೂ.ಗಳ ಮೊತ್ತದ ಕಾಮಗಾರಿಗೆ ಮುಂಗಡ ಪತ್ರದಲ್ಲಿ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇನೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಈ ಕಾಮಗಾರಿಯನ್ನು ಬಜೆಟ್‌ನಲ್ಲಿ ಸೇರಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.
ಕೌಜಲಗಿ, ಬಿಲಕುಂದಿ, ಗೋಸಬಾಳ, ಬಗರನಾಳ, ಮನ್ನಿಕೇರಿ ಹಾಗೂ ದಾಸನಾಳ ಗ್ರಾಮಗಳನ್ನೊಳಗೊಂಡ ಸುಮಾರು ೧೦ ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಘಟಪ್ರಭಾ ನದಿಯಿಂದ ತಳಕಟ್ನಾಳ ಗ್ರಾಮದ ಹತ್ತಿರ ಜಾಕವೆಲ್ ನಿರ್ಮಿಸಿ ಏತ ನೀರಾವರಿ ಮೂಲಕ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಈ ಕಾಮಗಾರಿ ಅನುಷ್ಠಾನಗೊಂಡಲ್ಲಿ ೦.೫೭ ಟಿಎಂಸಿ ನೀರನ್ನು ರೈತರ ಜಮೀನುಗಳಿಗೆ ಹರಿಸಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ