ಶೇಖರ ಕಲ್ಲೂರ, ಚನ್ನಮ್ಮನ ಕಿತ್ತೂರ
ಐತಿಹಾಸಿಕ ಚನ್ನಮ್ಮನ ಕಿತ್ತೂರು ಸಮೀಪದ ಹೊಸ ಚನ್ನಾಪೂರ ಗ್ರಾಮದ (ಕರೆಮ್ಮದೇವಿ ದೇವಸ್ಥಾನದ) ಹತ್ತಿರ ಉತ್ತರ ಕರ್ನಾಟಕದಲ್ಲಿಯೇ ಬೃಹತ್ ಆಕಾರದ ನೂತನ ಸೂರ್ಯದೇವ ದೇವಸ್ಥಾನ ನಿರ್ಮಾಣಗೊಂಡಿದೆ.
ಪಟ್ಟಣದಲ್ಲಿ ಸುಮಾರು 15 ರಿಂದ 20 ಕಲಾಲ ಸಮಾಜದ ಮನೆತನ ಇದ್ದು, ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸೂರ್ಯವಂಶಿ ಕ್ಷತ್ರಿಯ ಕಲಾಲ ಸಮಾಜದ ಕುಲದೇವರಾದ ಸೂರ್ಯದೇವ ದೇವಸ್ಥಾನವನ್ನು ಯಾವುದೇ ಸರಕಾರದ ಅನುದಾನವಾಗಲಿ ಅಥವಾ ಯಾವುದೇ ದೇಣಿಗೆ ಮೂಲಕ ನಿರ್ಮಿಸಿಲ್ಲ. ಕಿತ್ತೂರಿನ ಮೂಲದ ಸುರೇಶ ರಾಜಾರಾಮ್ ಜೋರಾಪುರ(ಕಲಾಲ) ಒಬ್ಬರೇ ಹಣ ನೀಡಿ ಈ ದೇವಸ್ಥಾನ ಕಟ್ಟಿಸಿದ್ದಾರೆ.
ಓರಿಸ್ಸಾ ರಾಜ್ಯದ ಕೊಣಾರ್ಕದಲ್ಲಿ ಸೂರ್ಯದೇವ ದೇವಸ್ಥಾನವಿದೆ. ಈಗ ಅದನ್ನು ಬಿಟ್ಟರೆ ನಮ್ಮ ರಾಜ್ಯದಲ್ಲಿ ಆ ಆಕಾರದ ದೇವಸ್ಥಾನ ಇರುವುದು ಕಿತ್ತೂರಿನ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿರುವ ಹೊಸ ಚನ್ನಾಪೂರ ಗ್ರಾಮದಲ್ಲಿ ಮಾತ್ರ. ಕಿತ್ತೂರಿನ ಉದ್ಯಮಿ ಸುರೇಶ ರಾಜರಾಮ್ ಜೋರಾಪುರ ಇವರ ಶ್ರಮದಿಂದ ಇಲ್ಲಿ ಬೃಹತ್ ಆಕಾರದ ಗೋಪುರ ಸಮೇತ ದೇವಸ್ಥಾನ ಎದ್ದು ನಿಂತಿದೆ.
ರಾಜಸ್ಥಾನದಿಂದ ದೇವರ ಮೂರ್ತಿಗಳನ್ನು ತರಲಾಗಿದೆ. ದೇವಸ್ಥಾನದ ಗರ್ಭಗುಡಿ ಒಳಗೆ ಒಂದೇ ಕಲ್ಲಿನಿಂದ ತಯಾರಿಸಿದ 5 ಅಡಿ ಎತ್ತರದ ಸೂರ್ಯದೇವ ಮೂರ್ತಿ, ಒಳಗಡೆ 3 ಅಡಿ ಎತ್ತರದ ನವಗ್ರಹ ಮೂರ್ತಿಗಳು ಹಾಗೂ ದೇವಸ್ಥಾನದ ಆವರಣ ಪ್ರವೇಶಿಸುತ್ತಿದ್ದಂತೆ ಎಡ ಹಾಗೂ ಬಲ ಬದಿಗೆ 5 ಅಡಿ ಎತ್ತರದ ಎರಡು ಮಾರ್ಬಲ್ ಆನೆಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.
ಹರಕೆ ಹೊತ್ತವರ ಇಷ್ಟಾರ್ಥ ಈಡೇರಿಸುವ ಆರಾಧ್ಯದೈವ ಸೂರ್ಯದೇವರಿಗೆ ಸುರೇಶ ಹಾಗೂ ರೇಖಾ ದಂಪತಿ ಮಕ್ಕಳ ಭಾಗ್ಯ ನೀಡಿದರೆ ದೇವಸ್ಥಾನ ಕಟ್ಟಿಸುತ್ತೇನೆ ಎಂದು ಹರಿಕೆ ಹೊತ್ತಿದ್ದರು. ದೈವ ಕೃಪೆಯಿಂದ ಅವರಿಗೆ ಶ್ರೀರಾಜಲಕ್ಷ್ಮೀ ಎನ್ನುವ ಹೆಣ್ಣು ಮಗು ಜನಿಸಿದಳು. ಆದ ಕಾರಣ ಕಳೆದ ಮೂರು ವರ್ಷದಿಂದ ದೇವಸ್ಥಾನ ಕಟ್ಟಲು ಪ್ರಾರಂಭ ಮಾಡಿದ್ದು, ಈಗ ಸಂಪೂರ್ಣ ಮುಕ್ತಾಯಗೊಂಡಿದೆ. ಫೆ.12 ರಿಂದ 15ರ ವರೆಗೆ ಸೂರ್ಯವಂಶಿ ಕ್ಷತ್ರಿಯ ಕಲಾಲ ಸಮಾಜದವರು ಸೇರಿಕೊಂಡು ದೇವಸ್ಥಾನದಲ್ಲಿ ಸೂರ್ಯದೇವರ ಹಾಗೂ ನವಗ್ರಹಗಳ ಮೂರ್ತಿ ಸ್ಥಾಪನೆ ಮಾಡುವರು.
ಈ ಭಾಗದ ಸೂರ್ಯವಂಶಿ ಕ್ಷತ್ರೀಯ ಕಲಾಲ ಸಮಾಜದ ಜನರಿಗೆ ಸೂರ್ಯದೇವರ ದರ್ಶನ ಪಡೆಯಬೇಕಾದರೆ ಓರಿಸ್ಸಾ ರಾಜ್ಯ ಕೊಣಾರ್ಕಕ್ಕೆ ಹೋಗಬೇಕಾದ ಪರಿಸ್ಥಿತಿ ಇತ್ತು. ಅದರೆ ನಮ್ಮ ಕರ್ನಾಟಕದಲ್ಲಿಯೆ ಈ ತರಹ ದೊಡ್ಡ ದೇವಸ್ಥಾನ ನಿರ್ಮಿಸಿ ನಮ್ಮ ಭಾಗದ ಜನರಿಗೆ ಸೂರ್ಯದೇವ ದರ್ಶನ ಪಡೆಯುವ ಅವಕಾಶ ಮಾಡಿಕೊಟ್ಟ ಸುರೇಶ ಜೋರಾಪೂರ ಅವರ ಕಾರ್ಯ ನಾಡಿನ ಜನತೆಗೆ ಸಂತಸ ತಂದಿದೆ ಎನ್ನುತ್ತಾರೆ ಉದ್ಯಮಿಗಳಾದ ಬಾಬು ಪರಂಡಿಕರ, ವಿಷ್ಟು ಕಲಾಲ ಹಾಗೂ ನಾಗರಾಜ ಜೋರಾಪುರ.
ನಮ್ಮ ಹರೆಕೆಯ ಪ್ರಕಾರ ನಮಗೆ ಒಬ್ಬಳು ಮಗಳು ಜನಿಸಿದಳು ಹಾಗೂ ನಮ್ಮೂರಿನಲ್ಲಿ ನಮ್ಮ ಕಲಾಲ ಸಮಾಜಕ್ಕೆ ನಮ್ಮ ಕುಲದೇವರಾದ ಸೂರ್ಯದೇವ ದೇವಸ್ಥಾನ ಅವಶ್ಯವಿತ್ತು. ಅದಕ್ಕೆ ದೇವಸ್ಥಾನ ನಿರ್ಮಿಸಿದ್ದೇನೆ. ಹಾಗೂ ನಾನು ಮತ್ತು ಸೂರ್ಯವಂಶಿ ಕ್ಷತ್ರಿಯ ಕಲಾಲ ಸಮಾಜದ ಹಾಗೂ ನಾಡಿನ ಎಲ್ಲ ಜನರು ಸೇರಿಕೊಂಡು ಫೆ.12 ರಂದು ಮೂರ್ತಿ ಸ್ಥಾಪನೆ ಮಾಡುತ್ತೇವೆ ಎನ್ನುತ್ತಾರೆ ದೇವಸ್ಥಾನ ಕಟ್ಟಿಸಿದ ಸುರೇಶ ಜೋರಾಪುರ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ