Latest

ಕಿತ್ತೂರು: ಪ್ರತಿಭಟನೆ ನಿರತ ಪೌರ ಕಾರ್ಮಿಕರ ಮನವೊಲಿಸಲು ಯತ್ನಿಸಿದ ಶಾಸಕ

     ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರ
 ವೇತನ ನೀಡುವಂತೆ ಆಗ್ರಹಿಸಿ ಆರಂಭಿಸಿರುವ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ ಧರಣಿ 14 ನೇ ದಿನಕ್ಕೆ ಕಾಲಿಟ್ಟಿದ್ದು, ಶಾಸಕ ಮಹಾಂತೇಶ ದೊಡಗೌಡರ ಸೋಮವಾರ ಧರಣಿನಿರತರ ಮನವೊಲಿಸಲು ಮುಂದಾದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯವ್ಯಾಪಿ ಪೌರ ಕಾರ್ಮಿಕರ ವೇತನದ ಕುರಿತು ಸಮಸ್ಯೆ ಎದುರಾಗಿದೆ. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಈಗಾಗಲೇ ಸದನದಲ್ಲಿ ಪ್ರಶ್ನೆ ಕೇಳುವ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು, ಕೆಲವೇ ದಿನಗಳಲ್ಲಿ ನಿಮಗೆ ವೇತನ ದೊರೆಯಲಿದೆ ಎಂದು ಭರವಸೆ ನೀಡಿದರು.  
ಇತಿಹಾಸ ಸಾರುವ ಪಟ್ಟಣ ಇದಾಗಿದ್ದು ಇಲ್ಲಿಗೆ ಬರುವ ಜನರು ಹಾಗೂ ಇಲ್ಲಿಯ ಸಾರ್ವಜನಿಕರು ಕಸ, ನೀರು ಸೇರಿದಂತೆ ಮೂಲಭೂತ ಸೌಕರ್ಯದ ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಕೂಡಲೇ ಪೌರಕಾರ್ಮಿಕರು ಧರಣಿಯನ್ನು ಕೈಬಿಟ್ಟು ಕೆಲಸ ಕಾರ್ಯಗಳ ಬಗ್ಗೆ ಗಮನ ಹರಿಸುವಂತೆ ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ತಿಪ್ಪಣ್ಣ ಚುಳಕಿ, ಪಟ್ಟಣ ಸ್ವಚ್ಚತೆ ಹಾಗೂ ಯಾವುದೇ ಮೂಲಭೂತ ಸೌಕರ್ಯ ಕಾಮಗಾರಿ ನಡೆಯಬೇಕಾದಲ್ಲಿ ಮೊದಲು ಪೌರ ಕಾರ್ಮಿಕರ ಅಗತ್ಯವಿರುತ್ತದೆ. ಆದರೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಪೌರ ಕಾರ್ಮಿಕರನ್ನು ಮರೆತು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಆದ ಕಾರಣ ಧರಣಿ ಮುಖಾಂತರ ಅವರ ಕಣ್ತೆರೆಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. 15 ತಿಂಗಳಿನಿಂದ ಪೌರಕಾರ್ಮಿಕರಾದ  ನಮಗೆ ಹಣ ನೀಡದೆ ಕೇವಲ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಕುಟುಂಬದ ನಿರ್ವಹಣೆಗೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ ಸಾಲ ಪಡೆದುಕೊಂಡು ಜೀವನ ನಡೆಸಲಾಗುತ್ತಿದೆ. ಈಗ ಸಾಲಗಾರರು ಮನೆ ಬಾಗಿಲಿಗೆ ಬಂದು ಸಾಲ ತಿರಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಕುಟುಂಬಗಳ ಸದಸ್ಯರು ರೋಸಿ ಹೋಗಿದ್ದು ದಿನಂಪ್ರತಿ ಸಮಸ್ಯೆ ಎದುರಿಸುವ ಪರಿಸ್ಥಿತಿಗೆ ಬಂದು ತಲುಪಿದೆ. ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 35 ಜನರು ಕೆಲಸ ನಿರ್ವಹಿಸುತ್ತಿದ್ದೇವೆ. ಎಲ್ಲರಿಗೂ ಏಕಕಾಲದಲ್ಲಿ ವೇತನ ನೀಡುವಂತೆ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಶಾಸಕ ಮಹಾಂತೇಶ ದೊಡಗೌಡರ, ಪೌರ ಕಾರ್ಮಿಕರಿಗೆ ವೇತನ ನೀಡುವ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. 
ಶೀಘ್ರ ನಿಮ್ಮ ಸಮಸ್ಯೆ ಬಗೆಹರಿಯಲಿದೆ ಎಂದು ಭರವಸೆ ನೀಡಿ ಪೌರಕಾರ್ಮಿಕರ ಮನವೊಲಿಸಿದರು. ನಂತರ ಸಮಾಲೋಚನೆ ನಡೆಸಿದ ಪೌರ ಕಾರ್ಮಿಕರು ಸೋಮವಾರದ ಸಂತೆಯ ಹಾಗೂ ಗುರುವಾರ ಸಂತೆಯ ಕಸವನ್ನು ಮಾತ್ರ ವಿಲೇವಾರಿ ಮಾಡಲಾಗುತ್ತದೆ. ಇದನ್ನು ಹೊರತು ಪಡಿಸಿ ಯಾವುದೇ ಕಾರ್ಯ ನಿರ್ವಹಿಸುವುದಿಲ್ಲ ಹಾಗೂ ಧರಣಿ ಕೈ ಬಿಡುವುದಿಲ್ಲವೆಂದು ಸ್ಪಷ್ಟ ಪಡಿಸಿದರು.
ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯ ಮಲ್ಲಿಕಾರ್ಜುನ ತಿಗಡಿ, ರಾಜು ಮಾದರ, ದೇವಪ್ಪ ಜೋತಗನ್ನವರ, ಸಂಜು ಕೋಲಕಾರ, ಶೆಟ್ಟೆಪ್ಪ ಕೋಲಕಾರ ಧರಣಿಗೆ ಬೆಂಬಲ ಸೂಚಿಸಿದರು. ಕೆಎಂಎಫ್ ನಿರ್ದೇಶಕ ಬಸವರಾಜ ಪರವಣ್ಣವರ, ಪಪಂ ಉಪಾಧ್ಯಕ್ಷ ಕಿರಣ ವಾಳದ, ಮುಖ್ಯಾಧಿಕಾರಿ ಬಿ.ಬಿ.ಗೋರೋಶಿ, ಹಿರಿಯ ಅಭಿಯಂತರ ರವೀಂದ್ರ ಗಡಾದ, ಪೌರ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ, ಆಶ್ರಫ್ ವೀರಾಪೂರ, ಮಂಜುನಾಥ ಚಿನ್ನನ್ನವರ, ಸುನೀಲ ಕಾದ್ರೊಳ್ಳಿ, ಮಡಿವಾಳಪ್ಪ ಚುಳಕಿ, ಬಾಲರಾಜ ಸಾಣಿಕೊಪ್ಪ, ಎಲ್ಲ ಪೌರ ಕಾರ್ಮಿಕರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button