Latest

ಕೃಷಿ ವಲಯಕ್ಕೆ 1.49ಲಕ್ಷ ಕೋಟಿ, ಗ್ರಾಮೀಣಾಭಿವೃದ್ಧಿಗೆ 1.38 ಲಕ್ಷ ಕೋಟಿ

 

   ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮತಬ್ಯಾಂಕ್‌ ಆಗಿರುವ ರೈತರನ್ನು ಓಲೈಸುವ ಉದ್ದೇಶದಿಂದ ಕೇಂದ್ರ ಸರಕಾರ ತನ್ನ ಮಧ್ಯಂತರ ಬಜೆಟ್‌ನಲ್ಲಿ ಕೃಷಿಕ ವರ್ಗಕ್ಕೆ ಹಲವು ಉಡುಗೊರೆಗಳನ್ನು ಘೋಷಿಸಿದ್ದು, ಕೃಷಿ ವಲಯಕ್ಕೆ ಈ ಬಜೆಟ್‌ನಲ್ಲಿ 1,49,981 ಕೋಟಿ ರೂಪಾಯಿ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ 1,38,962 ಕೋಟಿ ರೂಪಾಯಿಯನ್ನು ಕಾಯ್ದಿರಿಸಲಾಗಿದೆ. 

ಈ ವರ್ಷ ರಾಷ್ಟ್ರೀಯ ಗೋಕುಲ್‌ ಮಿಷನ್‌ಗೆ 750 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ದನಗಳ ಕಲ್ಯಾಣ ಕಾರ್ಯಕ್ರಮಕ್ಕಾಗಿ ರಾಷ್ಟ್ರೀಯ ಕಾಮಧೇನು ಆಯೋಗ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳಿಗೆ 566 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ಸಣ್ಣ ಹಾಗೂ ಮಧ್ಯಮ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಿಸಲಾಗಿದ್ದು, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ದೇಶದ ಸುಮಾರು 12 ಕೋಟಿ ರೈತ ಕುಟುಂಬಗಳಿಗೆ ಈ ಪ್ರೋತ್ಸಾಹ ಧನ ನೀಡಲಾಗುವುದು. 

ವಾರ್ಷಿಕ 3 ಕಂತುಗಳಲ್ಲಿ ಈ ಪ್ರೋತ್ಸಾಹ ಧನವನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತದೆ. 2018ರ ಡಿಸೆಂಬರ್‌ನಿಂದಲೇ ಈ ಯೋಜನೆ ಪೂರ್ವಾನ್ವಯವಾಗುವುದರಿಂದ ಚುನಾವಣೆಗೂ ಮೊದಲೇ ಮೊದಲ ಕಂತಿನ 2 ಸಾವಿರ ರೂಪಾಯಿ ರೈತರ ಖಾತೆಗೆ ಜಮೆಯಾಗಲಿದೆ. ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ಗೆ 2019-20ನೇ ಸಾಲಿಗಾಗಿ ಒಟ್ಟು 75 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು. ರೈತರ ಸಾಲಮನ್ನಾ ಮಾಡುವ ಬದಲು ಈ ಯೋಜನೆ ಪ್ರಕಟಿಸಲಾಗಿದೆ. 

 ತೆಲಂಗಾಣ ಮತ್ತು ಓಡಿಸ್ಸಾ ರಾಜ್ಯಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಈಗಾಗಲೇ ಅಲ್ಲಿನ ರಾಜ್ಯ ಸರಕಾರಗಳು ಜಾರಿಗೆ ತಂದಿವೆ. ತೆಲಂಗಾಣದಲ್ಲಿ ವಾರ್ಷಿಕ 8 ಸಾವಿರ ರೂಪಾಯಿ ಹಾಗೂ ಓಡಿಸ್ಸಾದಲ್ಲಿ ವಾರ್ಷಿಕ 12,500 ರೂಪಾಯಿ ಪ್ರೋತ್ಸಾಹ ಧನವನ್ನು ರೈತರಿಗೆ ನೀಡಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button