ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ನಗರದ ವಿಮಲ ವಿ. ಜಗಜಂಪಿ ಪ್ರತಿಷ್ಠಾನದ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವು ಫೆ.೨೪ ರಂದು ಬೆಳಗ್ಗೆ ೧೦.೧೫ಕ್ಕೆ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಜಗಜಂಪಿ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.೨೨ ರಂದು ತಮ್ಮ ತಾಯಿಯ ಜನ್ಮ ದಿನವಾಗಿದ್ದು ಅವರ ನೆನಪಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಈ ಬಾರಿ ಉದಯೋನ್ಮುಖ ಕಲಾವಿದರು ಸೇರಿದಂತೆ ಪ್ರತಿದಿನ ಮನೆಗಳಿಗೆ ಪತ್ರಿಕೆ ವಿತರಿಸುವ ಹುಡುಗರನ್ನು ಸಹ ಸನ್ಮಾನಿಸಲು ನಿರ್ಧರಿಸಲಾಗಿದೆ. ಎಲ್ಲರಿಗೂ ನಗದು ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು.
ಪತ್ರಕರ್ತ ಭೀಮಸೇನ ತೊರಗಲ್ಲ, ಚಿಕ್ಕೋಡಿಯ ವರದಿಗಾರ ಚಂದ್ರಕಾಂತ ಸಾಬಣೆ, ಸಾಹಿತಿ ಆರ್.ಎಸ್. ಚಾಪಗಾವಿ, ಸಂಕೇಶ್ವರದ ಲೇಖಕಿ ಹಮೀದಾ ಬಾನು ದೇಸಾಯಿ ಇವರನ್ನು ಸನ್ಮಾನಿಸಲಾಗುವುದು.
ಪತ್ರಕರ್ತ ಬಸವರಾಜ ಹುದ್ದಾರ, ವರದಿಗಾರ ಚೆನ್ನಪ್ಪಾ ಮಾದರ ಇವರಿಗೆ ಮಾಧ್ಯಮ ಪ್ರಶಸ್ತಿ, ಸಾಹಿತಿಗಳಾದ ಶೇಷಗಿರಿ ಮುತಾಲಿಕದೇಸಾಯಿ ಹಾಗೂ ಪ್ರೇಮಾ ತಾಶಿಲ್ದಾರ ಇವರಿಗೆ ’ಸಾಹಿತ್ಯ ಶ್ರೀ’ ಪ್ರಶಸ್ತಿ, ಉದಯೋನ್ಮುಖರಿಗೆ ಕೊಡುವ ’ಯುವ ಪ್ರತಿಭಾ ಸಾಹಿತ್ಯ ಪ್ರಶಸ್ತಿ’ಯನ್ನು ಲೇಖಕಿ ರಾಮದುರ್ಗದ ಸುನಂದಾ ಎಸ್. ಭರಮನಾಯ್ಕರ್ ಹಾಗೂ ದಾಸ್ತಿಕೊಪ್ಪದ ಸಿದ್ಧರಾಮ ತಳವಾರ ಇವರಿಗೆ ಹಾಗೂ ವಿಶೇಷ ಬಾಲಪ್ರತಿಭಾ ಪುರಸ್ಕಾರವನ್ನು ನರಗುಂದದ ಕು. ವೈದ್ಯತಿ ನಾಗರಾಜ ಕೋರಿಶೆಟ್ಟಿ ಅವರನ್ನು ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಬಸವರಾಜ ಜಗಜಂಪಿ, ಪ್ರತಿಷ್ಠಾನ ಸಂಚಾಲಕಿ ಪೂಜಾ ಜಗಜಂಪಿ, ಕಾರ್‍ಯದರ್ಶಿ ಅಶೋಕ ಮಳಗಲಿ, ಅಧ್ಯಕ್ಷ ಏಣಗಿ ಸುಭಾಷ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ