ಪ್ರಗತಿವಾಹಿನಿ ಸುದ್ದಿ, ತುಮಕೂರು :
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಎದ್ದಿರುವ ಬಂಡಾಯ ರಾಜ್ಯದಲ್ಲಿ ಮೈತ್ರಿ ಸರಕಾರದ ಅಸ್ಥಿತ್ವಕ್ಕೇ ಗಂಡಾಂತರ ತಂದಿಡಲಿದೆಯೇ ಎನ್ನುವ ಶಂಕೆ ಮೂಡಿಸಿದೆ.
ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸ್ಪರ್ಧಿಸುತ್ತಿರುವ ಕ್ಷೇತ್ರದಲ್ಲೇ ಕಾಂಗ್ರೆಸ್ ಗೆ ತನ್ನೊಳಗಿನ ಬಂಡಾಯವನ್ನು ಶಮನ ಮಡಲು ಸಾಧ್ಯವಾಗುತ್ತಿಲ್ಲ. ಹಾಲಿ ಸಂಸದರಿರುವ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟು ಕೈ ಸುಟ್ಟುಕೊಂಡಿರುವ ಕಾಂಗ್ರೆಸ್ ಈಗ ಜೆಡಿಎಸ್ ಎದುರು ತಲೆ ತಗ್ಗಿಸುವಂತಾಗಿದೆ.
ಸೋಮವಾರ ತುಮಕೂರು ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡ ನಾಮಪತ್ರ ಸಲ್ಲಿಸಿದರು. ಹಾಲಿ ಸಂಸದ ಮುದ್ದಹನುಮೇಗೌಡ, ಮತ್ತು ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಹ ನಾಮಪತ್ರ ಸಲ್ಲಿಸಿದ್ದಾರೆ.
ಈಗ ಬಂಡಾಯಗಾರರ ಮನವೊಲಿಸಲು ಕಾಂಗ್ರೆಸ್ ಸಫಲವಾಗುವುದೋ ಅಥವಾ ಜೆಡಿಎಸ್ ನಿಂದ ತುಮಕೂರು ಕ್ಷೇತ್ರವನ್ನು ವಾಪಸ್ ಪಡೆಯುವುದೋ ಎನ್ನುವುದನ್ನು ಕಾದುನೋಡಬೇಕಿದೆ. ಸಧ್ಯದ ಪರಿಸ್ಥಿತಿ ನೋಡಿದರೆ ಯಾವುದೂ ಸುಲಭವಿಲ್ಲ. ಆದರೆ ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ತುಂಬಿರುವುದರಿಂದ ಕಾಂಗ್ರೆಸ್ ಬಿ ಫಾರ್ಮ ಸಿಗದಿದ್ದರೆ ನಾಮಪತ್ರ ತಿರಸ್ಕೃತವಾಗಲಿದೆ. ಆಗ ರಾಜಣ್ಣ ಪಕ್ಷೇತರರಾಗಿ ಕಣದಲ್ಲಿ ಉಲಿಯುತ್ತಾರೋ ನೋಡಬೇಕಿದೆ.
ಒಟ್ಟಾರೆ ತುಮಕೂರು ಬಂಡಾಯ ರಾಜ್ಯದ ಮೈತ್ರಿ ಸರಕಾರಕ್ಕೇ ದೊಡ್ಡ ಕಂಟಕ ತಂದೊಡ್ಡುವ ಸಾಧ್ಯತೆ ಕಾಣುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ