Belagavi NewsBelgaum NewsKannada NewsKarnataka NewsPolitics

ನನ್ನಂತಹ ಗೃಹಿಣಿ ಶಾಸಕಿ, ಸಚಿವೆಯಾಗಲು ಅಂಬೇಡ್ಕರ್ ಸಂವಿಧಾನ ಕಾರಣ – ಶಶಿಕಲಾ ಜೊಲ್ಲೆ ; ಸ್ತವನಿಧಿಯಲ್ಲಿ ಗ್ರಂಥಾಲಯ, ಅಂಬೇಡ್ಕರ್ ಪ್ರತಿಮೆ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನವನ್ನು ಬರೆದ ಪರಿಣಾಮ ನನ್ನಂತಹ ಓರ್ವ ಸಾಮಾನ್ಯ ಗೃಹಿಣಿ ಶಾಸಕಿಯಾಗಿ, ಸಚಿವೆಯಾಗಿ ಸಮಾಜದ ಸೇವೆ ಮಾಡುವ ಅವಕಾಶ ಸಿಕ್ಕಿತು. ದೌಪದಿ ಮುರ್ಮು ಅವರಿಗೆ ರಾಷ್ಟ್ರಪತಿಯಾಗುವ ಅವಕಾಶ ಸಿಕ್ಕಿತು. ಇಂತಹ ವ್ಯಕ್ತಿತ್ವದ ಸನ್ಮಾನ ಬಿಜೆಪಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಸ್ಥಳೀಯ ತಮ್ಮ ಕಾರ್ಯಾಲಯದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ, ಗೌರವ ನಮನಗಳನ್ನು ಸಲ್ಲಿಸಿ ಮಾತನಾಡಿದರು.

ಎಲ್ಲ ದೇಶಗಳ ಸಂವಿಧಾನಗಳ ಅಧ್ಯಯನ ನಡೆಸಿ ಡಾ. ಅಂಬೇಡ್ಕರ್ ಅವರು ರಚಿಸಿದ ನಮ್ಮ ದೇಶದ ಸಂವಿಧಾನ ಇಡಿ ವಿಶ್ವಕ್ಕೆ ಮಾದರಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕಾಂಗ್ರೆಸ್ ಹುನ್ನಾರದಿಂದಾಗಿ ಸೋಲನುಭವಿಸಿದರು. ಅವರು ಚುನಾಯಿತರಾಗಿದ್ದಲ್ಲಿ ದೇಶ ಅಭಿವೃದ್ಧಿಯ ವೇಗ ಆಗಲೇ ಬೆಳೆಯುತ್ತಿತ್ತು. ಕಾಂಗ್ರೆಸ್ ಪಕ್ಷವು ಅನೇಕ ದಶಕಗಳವರೆಗೆ ಆಡಳಿತ ನಡೆಸಿತರಾದರೂ ಅವರಿಗೆ ಯಾವುದೇ ಗೌರವ ಸಲ್ಲಿಸದೆ, ಸ್ಥಾನಮಾನ ನೀಡದೆ ವಂಚಿಸಿತು. ಆದರೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಸರ್ಕಾರವು ಅವರನ್ನು ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರ ಕಾರ್ಯಕ್ಕೆ ಗೌರವಿಸಿತು ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಪಕ್ಷ ಆಡಳಿತಕ್ಕೆ ಬಂದ ನಂತರ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನಾನಾ ವಿಧಗಳಲ್ಲಿ ಗೌರವ ಸಲ್ಲಿಸಿತು. ಕೋಟ್ಯಂತರ ರೂಪಾಯಿಗಳ ಅನುದಾನದಲ್ಲಿ ಅವರ ಜನ್ಮಸ್ಥಳವನ್ನು ಅಭಿವೃದ್ಧಿಪಡಿಸಿ ಅಲ್ಲಿ ಸ್ಮಾರಕವನ್ನು ಸ್ಥಾಪಿಸಲಾಯಿತು. ಲಂಡನ್‌ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವಾಗ ಡಾ. ಅಂಬೇಡ್ಕರ್ ಅವರು ವಾಸಿಸುತ್ತಿದ್ದ ಸ್ಥಳವನ್ನು ಭಾರತ ಸರ್ಕಾರ ಖರೀದಿಸಿ ಅದನ್ನು ಪ್ರಧಾನಿ ಮೋದಿಯವರು ಶಿಕ್ಷಣ ಭೂಮಿಯಾಗಿ ಪರಿವರ್ತಿಸಿದರು. ಅಲ್ಲದೆ ಬೌದ್ಧ ಧರ್ಮವನ್ನು ದೀಕ್ಷೆ ಪಡೆದ ನಾಗಪುರದ ಸ್ಥಳವನ್ನು ಜೀರ್ಣೋದ್ಧಾರಗೊಳಿಸಿ ದೀಕ್ಷಾ ಸ್ಥಳ ಎಂದು ಹೆಸರಿಸಿ ಅಭಿವೃದ್ಧಿಪಡಿಸಿದರು. ದೆಹಲಿಯಲ್ಲಿಯ ಅವರ ಮಹಾನಿರ್ವಾಣ ಸ್ಥಳವನ್ನು ಕೋಟ್ಯಂತರ ರೂಪಾಯಿಗಳ ಅನುದಾನದಲ್ಲಿ ಸ್ಮಾರಕವನ್ನಾಗಿ ಪರಿವರ್ತಿಸಿದರು ಎಂದರು.

ಸ್ತವನಿಧಿಯಲ್ಲಿ ಗ್ರಂಥಾಲಯ, ಅಂಬೇಡ್ಕರ್ ಪ್ರತಿಮೆ


ಸ್ಥಳೀಯ ವರಾಳೆ ಅವರ ಮನೆಯಲ್ಲಿ ಡಾ. ಅಂಬೇಡ್ಕರ್ ಅವರು ತಂಗಿದ್ದ ಸಂದರ್ಭದಲ್ಲಿ ಸಮೀಪದ ಸ್ತವನಿಧಿ ಗ್ರಾಮಕ್ಕೆ ಅವರು ಕುದುರೆ ಸವಾರಿ ಮೂಲಕ ತೆರಳುತ್ತಿದ್ದರು. ಆ ಸ್ಥಳದಲ್ಲಿ ಯುವವರ್ಗ ಸೇರಿದಂತೆ ಎಲ್ಲರ ಜ್ಞಾನ ವೃದ್ಧಿಯಾಗಲೆಂದು ಅಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಿಸಲಾಗುವುದು. ಕುದುರೆ ಮೇಲಿನ ಅವರ ಭಾವಚಿತ್ರ ಸಿಕ್ಕಿದ್ದು ಅಂತಹದ್ದೆ ಒಂದು ಪ್ರತಿಮೆ ಅಲ್ಲಿ ನಿರ್ಮಿಸಲಾಗುವುದು ಎಂದರು.
ಅವರು ಚಿಕ್ಕೋಡಿಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರಿಂದ ಆ ನ್ಯಾಯಾಲಯಕ್ಕೆ ೩೮ ಕೋಟಿ ರೂ. ಅನುದಾನ ಅನುಮೋದನೆಗೊಳಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಬರುವ ದಿನಗಳಲ್ಲಿ ಅದು ಉದ್ಘಾಟನೆಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಯೋಗಿತಾ ಘೋರ್ಪಡೆ, ನಗರಸಭೆ ಸದಸ್ಯ ಜಯವಂತ ಭಾಟಲೆ, ರಾಜು ಗುಂದೇಶಾ, ಸುನೀಲ ಪಾಟೀಲ, ಸದ್ದಾಂ ನಗಾರಜಿ, ನೀತಾ ಬಾಗಡೆ, ಪ್ರಭಾವತಿ ಸೂರ್ಯವಂಶಿ, ಕಾವೇರಿ ಮಿರ್ಜೆ, ಸೋನಲ್ ಕೋಠಾಡಿಯಾ, ದೀಪಕ ಮಾನೆ, ಅವಿನಾಶ ಮಾನೆ, ಗಣು ಗೋಸಾವಿ, ಪ್ರೇಮ ಪೋಳ, ದತ್ತಾ ಜೋತ್ರೆ, ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button