*ಫ್ಲೈದುಬೈ ವಿಮಾನ ಹೈಜಾಕ್ ಯತ್ನ ಪ್ರಕರಣಕ್ಕೆ ಹೊಸ ತಿರುವು*: *ಮತ್ತಿಬ್ಬರು ಪೈಲಟ್ಗಳು ವಶಕ್ಕೆ!*

ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಒಮಾನ್ ಮೂಲದ ಸಹಪೈಲಟ್ ಹಮಾಮ್ ಅಲ್-ಹಮ್ಮಾಮಿ ಜೊತೆ ಸಂಪರ್ಕ ಹೊಂದಿರುವ ಶಂಕೆಯಲ್ಲಿ ಮಾಲ್ಡೀವ್ಸ್ ಮೂಲದ ಇಬ್ಬರು ಪೈಲಟ್ಗಳನ್ನು ಯುಎಇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಗಾಯಗೊಂಡಿದ್ದ ಭಾರತೀಯ ಪೈಲಟ್ಗೆ ವಿಮಾನದ ಕೆಲವು ಸಿಬ್ಬಂದಿ ನಿಗೂಢ ಮಾತ್ರೆ ನೀಡಲು ಯತ್ನಿಸಿದ್ದರು ಎಂಬ ಪ್ರಯಾಣಿಕರೊಬ್ಬರ ಆರೋಪವೂ ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಮಾಲ್ಡೀವ್ಸ್ ಮೂಲದ ಇಬ್ಬರೂ ಫ್ಲೈದುಬೈ ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ಗಳಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿದ್ದ ಅವರು, ಇಸ್ರೇಲ್ಗೆ ಸಂಚರಿಸುವ ವಿಮಾನಗಳಲ್ಲೂ ಕರ್ತವ್ಯ ನಿರ್ವಹಿಸಿದ್ದರು ಎಂದು ವರದಿಯಾಗಿದೆ. ಆರೋಪಿತ ಸಹಪೈಲಟ್ ಹಮಾಮ್ ವಾಸವಿದ್ದ ಕಟ್ಟಡದಲ್ಲೇ ಈ ಇಬ್ಬರೂ ನೆಲೆಸಿದ್ದರು ಎಂಬ ಮಾಹಿತಿ ಕುರಿತು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಛರ್ ಮೇಲೆ ಒಮಾನ್ ಮೂಲದ ಸಹಪೈಲಟ್ ಹಮಾಮ್ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈ ಘಟನೆಯಿಂದ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಮಾನದ ನಿಯಂತ್ರಣ ಕಳೆದುಕೊಳ್ಳುವ ಅಪಾಯ ಎದುರಾಗಿದ್ದರೂ, ಗಾಯಗೊಂಡಿದ್ದ ಭಾರತೀಯ ಪೈಲಟ್ ಮತ್ತು ಇತರರ ಪ್ರಯತ್ನದಿಂದ ವಿಮಾನವನ್ನು ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬೂಕ್ನಲ್ಲಿ ಇಳಿಸಲಾಗಿತ್ತು.
ಇದೀಗ ಈ ಪ್ರಕರಣದ ತನಿಖೆ ವಿಸ್ತರಿಸಿದ್ದು, ಹಮಾಮ್ ಜೊತೆ ಸಂಪರ್ಕ ಹೊಂದಿರುವ ಶಂಕೆಯಲ್ಲಿ ಇಬ್ಬರು ಮಾಲ್ಡೀವ್ಸ್ ಪೈಲಟ್ಗಳನ್ನು ಯುಎಇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರ ಪಾತ್ರವೇನು ಮತ್ತು ಹಲ್ಲೆಯ ಹಿಂದೆ ದೊಡ್ಡ ಸಂಚು ಇತ್ತೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇದರ ನಡುವೆ, ವಿಮಾನದಲ್ಲಿದ್ದ ಅಸ್ಸಾಫ್ ಎಂಬ ಪ್ರಯಾಣಿಕ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಹಲ್ಲೆಯ ಬಳಿಕ ಗಾಯಗೊಂಡು ಕುಸಿದುಬಿದ್ದಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಅವರಿಗೆ ವಿಮಾನದ ಕೆಲ ಸಿಬ್ಬಂದಿ ನಿಗೂಢ ಮಾತ್ರೆ ನೀಡಲು ಯತ್ನಿಸಿದ್ದರು ಎಂದು ಅವರು ಹೇಳಿದ್ದಾರೆ.
ಆರೋಪಿತ ಸಹಪೈಲಟ್ ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಕೆಲವು ಸಿಬ್ಬಂದಿ ಪ್ರಯತ್ನಿಸಿದ್ದರು. ಪ್ರಯಾಣಿಕರು ಘಟನೆಯನ್ನು ಚಿತ್ರೀಕರಿಸುವುದನ್ನೂ ತಡೆಯಲು ಯತ್ನಿಸಲಾಗಿತ್ತು ಎಂದು ಅಸ್ಸಾಫ್ ಆರೋಪಿಸಿದ್ದಾರೆ.
ವಿಮಾನದಲ್ಲಿ ನಡೆದ ಹಲ್ಲೆ, ಸಹಪೈಲಟ್ನ ಉದ್ದೇಶ ಮತ್ತು ಇತರ ಸಿಬ್ಬಂದಿಯ ಪಾತ್ರದ ಕುರಿತು ತನಿಖೆ ಮುಂದುವರಿದಿದೆ. ವಶಕ್ಕೆ ಪಡೆದಿರುವ ಇಬ್ಬರು ಪೈಲಟ್ಗಳಿಗೂ ಈ ಘಟನೆಯಲ್ಲಿ ನೇರ ಸಂಬಂಧವಿದೆಯೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ವಿಮಾನಯಾನ ಸುರಕ್ಷತೆ ಕುರಿತ ಹಲವು ಗಂಭೀರ ಪ್ರಶ್ನೆಗಳನ್ನು ಈ ಪ್ರಕರಣ ಹುಟ್ಟುಹಾಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




