ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಧಾನಮಂಡಳದ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಸೋಮವಾರ ಆರಂಭವಾಗಿದೆ.
ಮೊದಲ ದಿನ, ಈಚೆಗೆ ಅಗಲಿದ ಗಣ್ಯರಿಗೆ ಸಂತಾಪಸೂಚಕ ನಿರ್ಣಯ ಹೊರತುಪಡಿಸಿ ಮಹತ್ವದ ಕಲಾಪಗಳೇನೂ ನಡೆಯುವುದಿಲ್ಲ.
ಮುಖ್ಯಮಂತ್ರಿ ಕಮಾರಸ್ವಾಮಿ ಮಧ್ಯಾಹ್ನ 3 ಗಂಟೆಗೆ ವಿಧಾನಸಭೆಯ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಹಾಗೂ ಸಂಜೆ 4.30ಕ್ಕೆ ಇಸ್ರೇಲ್ ಕೃಷಿತಂತ್ರಜ್ಞಾನ ಅಳವಡಿಸುವ ಕುರಿತು ಕ್ರಿಯಾಯೋಜನೆ ಮಂಡಿಸುವ ಕುರಿತಂತೆ ಚರ್ಚಿಸಲು ಸುವರ್ಣ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಲಿದ್ದಾರೆ.
ಬಿಜೆಪಿ ರೈತರ ಸಮಾವೇಶ ಆಯೋಜಿಸಿದ್ದು, ಸರಕಾರದ ವಿರುದ್ಧ ಮೊದಲ ದಿನವೇ ಪ್ರತಿಭಟನೆಯ ಕಹಳೆ ಊದಲಿದೆ. ಸೋಮವಾರ ಬೆಳಗ್ಗೆಯಿಂದಲೇ ವಿಧಾನಸೌಧದ ಹೊರಗೆ ರಾಜಕೀಯ ನಾಯಕರೆಲ್ಲ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ.
ಮುಖ್ಯಮಂತ್ರಿಗೆ ದುರಹಂಕಾರ, ಸೊಕ್ಕು ಬಂದಿದೆ ಎಂದು ಬಿ.ಎಸ್.ಯಡಿಯೂರಪ್ಪ ಆರೋಪಿಸಿದರೆ, ಅಧಿವೇಶನ ಸರಿಯಾಗಿ ನಡೆಯಲಿದೆ. ನನಗೆ ಯಾರ ಸರ್ಟಿಫಿಕೇಟ್ ಬೇಕಿಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಆರಂಭದ ದಿನ ಕಲಾಪದಲ್ಲಿ ಬಹುತೇಕ ಶಾಸಕರು ಹಾಜರಿಲ್ಲ. ವಿಶೇಷವೆಂದರೆ ಆಡಳಿತ ಪಕ್ಷದ ಪ್ರಮುಖರೂ ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿದ್ದು, ಆಡಳಿತ ಮೈತ್ರಿಗೆ ಮುಜುಗರ ಉಂಟಾಗಿದೆ.
ಅದೇ ವೇಶಾನಾ?: ಸುವರ್ಣವಿಧಾನಸೌಧ ಬೆಳಗಾವಿಯಲ್ಲಿ ನಿರ್ಮಾಣವಾಗಿದ್ದು ಬಿಟ್ಟರೆ ಈವರೆಗೂ ಯಾವುದೇ ಮಹತ್ವದ ಲಾಭ ಇದರಿಂದ ಆಗಿಲ್ಲ. ಈವರೆಗಿನ ಅಧಿವೇಶನಕ್ಕೆ ಸುಮಾರು 100 ಕೋಟಿ ರೂ ಖರ್ಚಾಗಿದ್ದು, ಬೆಳಗಾವಿಗಾಗಲಿ ಉತ್ತರ ಕರ್ನಾಟಕಕ್ಕಾಗಲಿ ನಿರೀಕ್ಷಿತ ಪ್ರಯೋಜನವಾಗಿಲ್ಲ.
ಪಕ್ಷಭೇದವಿಲ್ಲದೆ ಜನಪ್ರತಿನಿಧಿಗಳು ಸದನದೊಳಗೆ ಕಚ್ಚಾಡಿದ್ದೇ ಹೆಚ್ಚು. ಈ ಬಾರಿಯೂ ಇವರದ್ದು ಅದೇ ವೇಶಾನಾ ಅಥವಾ ಏನಾದರೂ ಮೌಲ್ಯಯುತ ಚರ್ಚೆ ನಡೆಸುತ್ತಾರಾ ಕಾದು ನೋಡಬೇಕಿದೆ.
ಸಧ್ಯದ ಪರಿಸ್ಥಿತಿ ನೋಡಿದರೆ ರಾಜಕೀಯ ಬಡಿದಾಟವೇ ಹೆಚ್ಚು ಕಾವು ಪಡೆಯುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ