ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರತಿವರ್ಷದಂತೆ ಈ ವರ್ಷವೂ ಕೂಡ ಫೆಬ್ರುವರಿ 3, 4, ಮತ್ತು 5 ರಂದು ನಡೆಯುವ ಯಡೂರಿನ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಆಹ್ವಾನಿಸಲಾಗಿದೆ.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಯೋಗಿಯವರನ್ನು ಭೇಟಿ ಮಾಡಿ ಜಾತ್ರಾ ಮಹೋತ್ಸವದ ಸಾನಿಧ್ಯ ವಹಿಸಬೇಕೆಂದು ಕೋರಿದರು. ಆಹ್ವಾನ ಸ್ವೀಕರಿಸಿದ ಯೋಗಿ ಅವರು ಸಮಾರಂಭಕ್ಕೆ ಬರಲು ಒಪ್ಪಿಕೊಂದ್ದಾರೆ ಎಂದು ಸ್ವಾಮಿಗಳು ತಿಳಿಸಿದ್ದಾರೆ.
ಜಾತ್ರೆಯ ಸಂದರ್ಭದಲ್ಲಿ 11 ಲಕ್ಷ ಬಿಲ್ವಾರ್ಚನೆ, ಮಹಾದ್ವಾರ ಉದ್ಘಾಟನೆ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಗೆ ಪ್ರತಿಷ್ಠಿತ “ವಿಶ್ವಚೇತನ ಪ್ರಶಸ್ತಿ” ಮುಖಮಂಟಪ ಹಾಗೂ ದ್ವಜಸ್ತಂಭಗಳ ಉದ್ಘಾಟನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗುತ್ತಿವೆ.
ಉತ್ತರ ಕರ್ನಾಟಕದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರಿನ ಶ್ರೀ ವೀರಭದ್ರ ದೇವಸ್ಥಾನ ಮತ್ತು ಕಾಡಸಿದ್ದೇಶ್ವರಮಠ ಪವಿತ್ರ ತಾಣಗಳೆನಿಸಿವೆ.
ಶ್ರೀ ವಿರೂಪಾಕ್ಷಲಿಂಗ ದೇವಸ್ಥಾನ ಮತ್ತು ಕಾಡಸಿದ್ದೇಶ್ವರ ಮಠ ಧರ್ಮ ಸಮನ್ವಯದ ಸಾಕ್ಷಾತ್ಕಾರ ಕ್ಷೇತ್ರ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ. ಜಾತಿ- ಮತ-ಭೇದ ಭಾವವಿಲ್ಲದೆ, ಮುಸ್ಲಿಂ ಜನಾಂಗದವರು ದರ್ಶನ ಪಡೆಯುವುದು ವಿಶೇಷ. ಈರ್ ಬೀರ್ ಮತ್ತು ಪೀರನ ಮೂರ್ತಿಗಳಿವೆ. ಇವು ವೀರಶೈವ ಹಾಲುಮತ ಹಾಗೂ ಇಸ್ಲಾಂ ಜನಾಂಗದವರ ಆರಾಧ್ಯ ದೈವಗಳ ಪ್ರತೀಕ.
ಶ್ರೀ ಕೃಷ್ಣಾ ನದಿಯ ದಂಡೆಯ ಮೇಲಿರುವ ನಿಸರ್ಗ ರಮಣೀಯ ಶ್ರೀ ವೀರಭದ್ರ ದೇವಸ್ಥಾನ ನಾಡಿನ ಭಕ್ತರನ್ನು ಕೈಬೀಸಿ ಕರೆಯುತ್ತಿವೆ. ಪುರಾತನ ಕಾಲದ ಕಟ್ಟಡ ಗಳಾಗಿದ್ದರೂ ಕಾಡಸಿದ್ದೇಶ್ವರ ಮಠ ನೆಚ್ಚಿನ ತಾಣವಾಗಿದೆ. ಈ ಮಠಕ್ಕೆ ಸುಮಾರು 2000 ವರ್ಷಗಳ ಸುದೀರ್ಘ ಇತಿಹಾಸವಿದೆ.
ದಕ್ಷ ಬ್ರಹ್ಮನ ಯಜ್ಞ ಇಲ್ಲಿ ಜರುಗಿತ್ತು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ದಕ್ಷಬ್ರಹ್ಮನ ಯಜ್ಞವನ್ನು ಧ್ವಂಸಗೊಳಿಸಿ ವೀರಭದ್ರನು ಇಲ್ಲಿಯೇ ಲಿಂಗರೂಪದಲ್ಲಿ ನೆಲೆಸಿರುವುದು ಈ ದೇವಾಲಯದ ಪೌರಾಣಿಕ ಹಿನ್ನೆಲೆ.
ಇಲ್ಲಿನ ವೈಶಿಷ್ಟ್ಯ ಗಳು ಅನೇಕಾನೇಕ. ದೇವಸ್ಥಾನ ಮತ್ತು ಶ್ರೀ ಮಠದ ಘನತೆ ಮತ್ತು ಗೌರವವನ್ನು ಹೆಚ್ಚಿಸಿದವರು ಈಗಿನ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾದ್ಯ ಶಿವಾಚಾರ್ಯರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ