ಪ್ರಗತಿವಾಹಿನಿ ಸುದ್ದಿ: ಖಾಸಗಿ ಕೋಚಿಂಗ್ ಕೇಂದ್ರಗಳ ಒತ್ತಡ ಹಾಗೂ ದರ ವಸೂಲಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹೊಸ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ರಾಜ್ಯ ಉನ್ನತ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಈ ಹೊಸ ನಿಯಮಗಳಲ್ಲಿ ಹಲವು ಮಹತ್ವದ ಅಂಶಗಳಿವೆ. 15 ವರ್ಷದ ಕೆಳಗಿನ ಅಥವಾ ಹತ್ತನೇ ತರಗತಿ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ಯಾವುದೇ ಖಾಸಗಿ ಕೋಚಿಂಗ್ ಕೇಂದ್ರಗಳು ದಾಖಲಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡವನ್ನು ತಗ್ಗಿಸಲು ಕೋಚಿಂಗ್ ತರಗತಿಗಳ ಅವಧಿಯನ್ನು ಪ್ರತಿದಿನ ಗರಿಷ್ಠ ಐದು ಗಂಟೆಗಳಿಗೆ (ಪರೀಕ್ಷೆ ಮತ್ತು ರಿವಿಷನ್ ಸೇರಿದಂತೆ) ಮಿತಿಗೊಳಿಸಲಾಗಿದೆ. ಈ ಕೇಂದ್ರಗಳು ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು ಹಾಗೂ ಮುಖ್ಯ ಶಾಲೆ ಅಥವಾ ಕಾಲೇಜು ಅವಧಿಯಲ್ಲಿ ಯಾವುದೇ ತರಗತಿಗಳನ್ನು ನಡೆಸುವಂತಿಲ್ಲ. ಇದರೊಂದಿಗೆ, ಪ್ರತಿ ಕ್ಯಾಂಪಸ್ನಲ್ಲಿ ಕಡ್ಡಾಯವಾಗಿ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸಬೇಕು ಎಂದು ಸೂಚಿಸಲಾಗಿದೆ.
ಪೂರ್ಣ ಕೋರ್ಸ್ ಶುಲ್ಕವನ್ನು ಒಂದೇ ಬಾರಿಗೆ ಮುಂಗಡವಾಗಿ ಪಡೆಯುವುದನ್ನು ನಿಷೇಧಿಸಲಾಗಿದೆ. ಪೋಷಕರು ಕನಿಷ್ಠ ನಾಲ್ಕು ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ವಿದ್ಯಾರ್ಥಿಗಳು ಮಧ್ಯದಲ್ಲೇ ಕೋರ್ಸ್ ತೊರೆದಲ್ಲಿ, ಉಳಿದ ಅವಧಿಯ ಶುಲ್ಕವನ್ನು 10 ದಿನಗಳ ಒಳಗೆ ವಾಪಸ್ ನೀಡಬೇಕು ಎಂದು ಕಡ್ಡಾಯಗೊಳಿಸಲಾಗಿದೆ.
ಮಾರ್ಗಸೂಚಿ ಉಲ್ಲಂಘಿಸುವ ಮತ್ತು ನೋಂದಣಿ ಮಾಡಿಕೊಳ್ಳದ ಸಂಸ್ಥೆಗಳಿಗೆ ಭಾರೀ ದಂಡ ವಿಧಿಸುವುದರ ಜೊತೆಗೆ, ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ದಂಡ ಅಥವಾ ಸಂಸ್ಥೆಯನ್ನು ಸೀಲ್ ಮಾಡುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ. ಈ ಕರಡು ನಿಯಮಗಳ ಕುರಿತು ಸಾರ್ವಜನಿಕರು 15 ದಿನಗಳೊಳಗೆ ತಮ್ಮ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




