Latest

ವಿಟಿಯು ವಿಭಜನೆ ಪ್ರಸ್ತಾವನೆ ‘ಸದ್ಯ’ ಸರಕಾರದ ಮುಂದೆ ಇಲ್ಲ- ಸಿಎಂ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸಿ ಹಾಸನದಲ್ಲಿ ಪ್ರತ್ಯೇಕ ತಾಂತ್ರಿಕ ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವ ಪ್ರಸ್ತಾವನೆ ಸದ್ಯ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ. ಅಲ್ಲದೆ ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಮಾಧ್ಯಮ ಪ್ರಕಟಣೆಯ್ನೂ ನೀಡಲಾಗಿದೆ.  ಸೋಮವಾರ ತಾವು ನೀಡಿದ್ದ ಹೇಳಿಕೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದೂ ಸಿಎಂ ಹೇಳಿದ್ದಾರೆ.

ಆದರೆ, ಮುಖ್ಯಮಂತ್ರಿಗಳ ಪತ್ರಿಕಾ ಪ್ರಕಟಣೆ ಮತ್ತು ಟ್ವೀಟರ್ ಎರಡೂ ಕಡೆ ‘ಸದ್ಯ’ ಎನ್ನುವ ಶಬ್ದವನ್ನು ಬಳಸಲಾಗಿದೆ. ವಿಭಜನೆ ಪ್ರಸ್ತಾವ ಸದ್ಯ ಸರಕಾರದ ಮುಂದಿಲ್ಲ ಎಂದಿದ್ದಾರೆ. ಸಧ್ಯ ಎಂದರೆ ಎಷ್ಟು ದಿನ?  ಎನ್ನುವ ಸ್ಪಷ್ಟನೆ ಇಲ್ಲ. ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ನಿರ್ಧಾರವನ್ನು ಕೈ ಬಿಡಲಾಗಿದೆ ಎಂದು ಎಲ್ಲಿಯೂ ಹೇಳಿಲ್ಲ.

ಹಾಗಾಗಿ ಸಚಿವ ಸಂಪುಟ ಸಭೆಯಲ್ಲಿ ಇಲ್ಲವೇ ವಿಧಾನಮಂಡಳದಲ್ಲಿ ಅಧಿಕೃತವಾಗಿ ಬಜೆಟ್ ಪ್ರಸ್ತಾವನೆ ಕೈ ಬಿಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಬೇಕು. ಆಗಲೇ ಅಧಿಕೃತವಾಗಲಿದೆ.

ವಿಟಿಯು ವಿಭಜಿಸದಂತೆ ಬೆಳಗಾವಿಯಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆದಿರುವುದು ಇಲ್ಲಿ ಉಲ್ಲೇಖನೀಯ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button