Latest

ವಿಟಿಯು ವಿಭಜನೆಗೆ ಹಣಮಂತ ನಿರಾಣಿ ವಿರೋಧ

ಪ್ರಗತಿವಾಹಿನಿ ಸುದ್ದಿ, ಬೀಳಗಿ :
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಂಗಡಿಸಿ ಹಾಸನದಲ್ಲಿ ಸ್ಥಾಪಿಸಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 
ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ವಿಟಿಯು ವಿಭಜಿಸುವ ಬಗ್ಗೆ ಸಮ್ಮಿಶ್ರ ಸರಕಾರ ಪ್ರಸ್ತುತ ಬಜೆಟ್‌ನಲ್ಲಿ ಘೋಷಿಸಿರುವುದು ಅಖಂಡ ವಿ.ವಿ. ಒಡೆದು ಇದರ ಪ್ರತಿಷ್ಠೆ ಹಾಳು ಮಾಡುವ ಕುತಂತ್ರವಾಗಿದೆ ಎಂದು ನಿರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಟಿಯು ವಿಶ್ವಮಟ್ಟದಲ್ಲಿ ದೊಡ್ಡ ಹೆಸರು ಮಾಡಿದೆ. ದೇಶ ಹಾಗೂ ವಿದೇಶಿ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಅಧ್ಯಯನ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ೪.೫ ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಇದು ಕರ್ನಾಟಕದ ಅಖಂಡತೆಯ ಸಂಕೇತವಾಗಿದೆ. ಇದನ್ನು ವಿಭಜಿಸುವ ಪ್ರಯತ್ನದಿಂದ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ಹೆಚ್ಚಾಗುವ ಅಪಾಯವಿದೆ. ಇದನ್ನು ಸರಕಾರ ಅರಿತುಕೊಳ್ಳಬೇಕೆಂದು ಹಣಮಂತ ನಿರಾಣಿ ಎಚ್ಚರಿಕೆ ನೀಡಿದ್ದಾರೆ.
ಮಹಿಳಾ ವಿ.ವಿ. ವಿಭಜಿಸುವ ಅಪಾಯ: ವಿಟಿಯು ವಿಭಜನೆಯ ಮಾದರಿಯಲ್ಲಿಯೇ ಮುಂದೆ ವಿಜಯಪುರದ ಅಕ್ಕಮಹಾದೇವಿ ವಿ.ವಿ.ಯನ್ನು ಕೂಡ ವಿಭಜಿಸುವ ಅಪಾಯವಿದೆ ಎಂದು ಅಕ್ಕಮಹಾದೇವಿ ವಿ.ವಿ. ಸಿಂಡಿಕೇಟ್ ಸದಸ್ಯರೂ ಆಗಿರುವ ಹಣಮಂತ ನಿರಾಣಿ ಅನುಮಾನ ವ್ಯಕ್ತ ಪಡಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button