ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಗಾಲಿಕುರ್ಚಿ, ಬ್ರೈಲ್ ಮತಚೀಟಿ ಒದಗಿಸುವುದು ಸೇರಿದಂತೆ ಮತದಾನದ ದಿನ ವಿಶೇಷಚೇತನರ ಮತದಾನಕ್ಕೆ ಸಕಲ ಅನುಕೂಲ ಕಲ್ಪಿಸಬೇಕು ಎಂದು ಪ್ರಾದೇಶಿಕ ಆಯುಕ್ತ ತುಷಾರ ಗಿರಿನಾಥ ಸೂಚನೆ ನೀಡಿದರು.
ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಒದಗಿಸಲಾಗುವ ವಿವಿಧ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮತಚೀಟಿ ಸೇರಿದಂತೆ ಮತದಾನ ಜಾಗೃತಿ ಕುರಿತು ತಯಾರಿಸಲಾಗುವ ಕೆಲವು ಪ್ರಚಾರ ಸಾಮಗ್ರಿಗಳು ಬ್ರೈಲ್ ಲಿಪಿಯಲ್ಲಿರಬೇಕು. ವಿಶೇಷಚೇತನ ಮತದಾರರ ಅನುಕೂಲಕ್ಕಾಗಿ ಕಲ್ಪಿಸಲಾಗಿರುವ ಸೌಲಭ್ಯಗಳ ಮಾಹಿತಿಯನ್ನು ಒಳಗೊಂಡ ಮಾಹಿತಿ ಪುಸ್ತಕವನ್ನು ತಕ್ಷಣವೇ ತಯಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮತಗಟ್ಟೆಗಳಿಗೆ ಆಗಮಿಸುವ ವಿಶೇಷಚೇತನರ ಸಂಖ್ಯೆಗೆ ಅನುಗುಣವಾಗಿ ಗಾಲಿಕುರ್ಚಿಗಳ ವ್ಯವಸ್ಥೆ ಕಲ್ಪಿಸಬೇಕು. ಸಾಧ್ಯವಾದರೆ ಗಾಲಿಕುರ್ಚಿ ಅಗತ್ಯವಿರುವ ಮತದಾರರನ್ನು ಮುಂಚಿತವಾಗಿಯೇ ಗುರುತಿಸಿ, ಹೆಸರು ನೋಂದಾಯಿಸಿಕೊಂಡು ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ನಾಮದೇವ ಬಿಲಕರ್, ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಕಲ್ಪಿಸಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಇಬ್ರಾಹಿಂ ಮೈಗೂರ, ಉಪ ವಿಭಾಗಾಧಿಕಾರಿ ಡಾ. ಕವಿತಾ ಯೋಗಪ್ಪನವರ, ಸೋಮಲಿಂಗ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.