Latest

ವೇಣುಗ್ರಾಮ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಉದ್ಘಾಟನೆ

ಪ್ರಗತಿವಾಹಿನಿ, ಬೆಳಗಾವಿ:
ಬೆಳಗಾವಿಯ ವೇಣುಗ್ರಾಮ ಆಸ್ಪತ್ರೆಯಲ್ಲಿ ಮೂತ್ರಪಿಂಡ ಚಿಕಿತ್ಸೆಗಾಗಿ ನೂತನವಾಗಿ ಅಳವಡಿಸಲಾದ ಡಯಾಲಿಸಿಸ್ ಘಟಕ ಮತ್ತು ದಿನದ ೨೪ ಗಂಟೆಗಳ ಸೇವೆ ನೀಡುವ ನವಜಾತ ಶಿಶುಗಳ ರಕ್ಷಣಾ ಘಟಕದ ಉದ್ಘಾಟನೆ ಕಾರ್ಯಕ್ರಮ ಇತ್ತಿಚಿಗೆ ನೆರವೇರಿತು.
ರಾಣಿ ಚೆನ್ನಮ್ಮ ನಗರದಲ್ಲಿರುವ ಅಂಕುರ ಬುದ್ದಿಮಾಂದ್ಯ ಶಾಲೆಯ ವಿದ್ಯಾರ್ಥಿಗಳು ಡಯಾಲಿಸಿಸ್ ಘಟಕ ಮತ್ತು ನವಜಾತ ಶಿಶುಗಳ ರಕ್ಷಣಾ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೇಣುಗ್ರಾಮ ಆಸ್ಪತ್ರೆಯ ನಿರ್ದೇಶಕರು ಹಾಗೂ ಹಿರಿಯ ವೈದ್ಯರಾದ ಡಾ.ರಮೇಶ ದೇಶಪಾಂಡೆ ಅವರು ಮಾತನಾಡಿ, ಕಳೆದ ಒಂದು ವರ್ಷದ ಹಿಂದೆ ವೇಣುಗ್ರಾಮ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದ್ದು, ರೋಗಿಗಳಿಗೆ ಸಕಾಲ ಮತ್ತು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರನ್ನು ಶೀಘ್ರವಾಗಿ ಗುಣಪಡಿಸಲಾಗುತ್ತಿದೆ ಎಂದರು.
ಆಸ್ಪತ್ರೆಯಲ್ಲಿ ಎಲ್ಲ ತರಹದ ಚಿಕಿತ್ಸಾ ಘಟಕಗಳಿದ್ದು, ಎಲ್ಲ ರೋಗಗಳ ಮೇಲೆ ಉಪಚಾರ ನೀಡಲಾಗುತ್ತಿದೆ. ಇದೀಗ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಮತ್ತು ನವಜಾತ ಶಿಶುಗಳ ರಕ್ಷಣಾ ಘಟಕವನ್ನು ಪ್ರಾರಂಭಿಸಲಾಗಿದ್ದು, ಈ ಮೂಲಕ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಅರುಣ ಬ್ಯಾಕೋಡಿ, ಡಾ. ಶ್ರೀಪತಿ ಪಿಸೆ, ಡಾ. ಗೋಮಟೇಶ ಕುಸನಾಳೆ, ಡಾ.ಚೈತನ್ಯ ಕುಲಕರ್ಣಿ, ಡಾ.ಅಭಿನಂದನ ಹಂಜಿ, ಡಾ.ಪ್ರಿಯದರ್ಶಿನಿ ಕುಲಕರ್ಣಿ, ಡಾ. ಹನುಪದ್ಮಜಾ ಹಂಜಿ, ಡಾ. ವರ್ಷಾ ದೇಶಪಾಂಡೆ, ಡಾ. ಚೈತನ್ಯ ಖೇಮಲಾಪುರೆ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button