ಪ್ರಗತಿವಾಹಿನಿ ಸುದ್ದಿ, ಬೆಂಗಳೂರು;
ಕರ್ನಾಟಕ ಶ್ರೀಗಂಧ ಮಂಡಳಿ ರಚನೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ಸ್ಯಾಂಡಲ್‌ವುಡ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ ಜೆ.ಎನ್. ಟಾಟಾ ಆಡಿಟೋರಿಯಂನಲ್ಲಿ ಇಂದು ಆಯೋಜಿಸಿದ್ದ “ಶ್ರೀ ಗಂಧದ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ಪ್ರಾಮುಖ್ಯತೆ” ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದರು.
ಅರಣ್ಯ ಇಲಾಖೆಯು ಮಂಡಳಿ ರಚನೆ ಸಂಬಂಧ ವರದಿ ನೀಡುವಂತೆ ಸೂಚನೆನೀಡಲಾಗಿದೆ. ವರದಿ ಬಳಿಕ ಶ್ರೀಗಂಧ ಮಂಡಳಿ ರಚನೆ ಮಾಡಲಾಗುವುದು ಎಂದು ಹೇಳಿದರು.
ಕೃಷಿ, ಅರಣ್ಯ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶ್ರೀಗಂಧದ
ಹೊಸ ತಳಿಗಳನ್ನು ಸಂಶೋದನೆ ಮಾಡುವ ಅಗತ್ಯವಿದೆ. ಈ ಮೂಲಕ ಶ್ರೀಗಂಧ ಗಿಡಗಳನ್ನು ಬೆಳೆಸಬೇಕು.
ಎಲ್ಲಾ ರೈತರು ಶ್ರೀಗಂಧ ಮರ ಬೆಳೆಸಬೇಕಿದೆ. ಮೊದಲೆಲ್ಲಾ ಎಲ್ಲರೂ ಈ ಬೆಳೆ ಬೆಳೆಯಲು ಅವಕಾಶವಿರಲಿಲ್ಲ. 2001 ರಲ್ಲಿ ಈ ಸಂಬಂಧ ಕಾಯಿದೆಗೆ ತಿದ್ದುಪಡಿ ತಂದು ಎಲ್ಲಾರು ಶ್ರೀಗಂಧ ಸಸಿ ಬೆಳೆಯಲು ಅವಕಾಶ ಮಾಡಿಕೊಡಲಾಯಿತು. ಪ್ರಸ್ತುತ 35 ಸಾವಿರ ಎಕರೆ ಜಾಗದಲ್ಲಿ ಶ್ರೀಗಂಧ ಬೆಳೆಯಲಾಗುತ್ತಿದೆ. ಜೊತೆಗೆ ಶ್ರೀಗಂಧ ಬೆಳೆಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಶ್ರೀಗಂಧಕ್ಕೂ 100 ರುಪಾಯಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.
ಆರ್ಥಿಕ ದೃಷ್ಟಿಯಿಂದ ಪ್ರತಿಯೊಬ್ಬ ರೈತ ಶ್ರೀಗಂಧ ಬೆಳೆಯಲಿ. ಇದಕ್ಕೆ ಹೆಚ್ಚು ಪ್ರೋತ್ಸಾಹ ಕೊಡಬೇಕು. ಈ ನಿಟ್ಟಿನಲ್ಲಿ ನಮ್ಮ ಸರಕಾರ ಬೆಂಬಲ ನೀಡಲಿದೆ.
ಬಾಗಲಕೋಟೆಯಲ್ಲಿ ಶ್ರೀಗಂಧ ಜ್ಞಾನ ಉದ್ಯಾನವನ ಮಾಡಲು ಈ ಬಜೆಟ್‌ನಲ್ಲಿ ಘೋಷಿಸಿದ್ದು, ಈ ವರ್ಷವೇ ಚಾಲನೆ ನೀಡಲಿದ್ದೇವೆ ಎಂದು ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ