Latest

ಸಾಲ ಮನ್ನಾ ಜಾರಿಗೊಳಿಸಲು ಇಚ್ಛಿಸುವ ರಾಜ್ಯಗಳಿಗೆ ನಮ್ಮ ರಾಜ್ಯ ಮಾದರಿಯಾಗಲಿದೆ -ಸಿಎಂ

 
  ಪ್ರಗತಿವಾಹಿನಿ ಸುದ್ದಿ, ಸುವರ್ಣವಿಧಾನಸೌಧ ಬೆಳಗಾವಿ
ಸಾಲ ಮನ್ನಾ ಯೋಜನೆಯನ್ನು ಜಾರಿಗೊಳಿಸಲು ಇಚ್ಛಿಸುವ ರಾಜ್ಯಗಳಿಗೆ ನಮ್ಮ ರಾಜ್ಯ ಮಾದರಿಯಾಗಲಿದೆ ಎಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,  ಕೇಂದ್ರ ಸರ್ಕಾರವೂ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ನಮ್ಮ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯ ಮಾದರಿಯ ಕುರಿತು ಮಾಹಿತಿ ಪಡೆದುಕೊಂಡಿವೆ ಎಂದಿದ್ದಾರೆ.
ಬರ ಮತ್ತು ರೈತರ ಸಾಲಮನ್ನಾ ಕುರಿತಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರಿಸುತ್ತಿದ್ದರು. ಪ್ರತಿಪಕ್ಷದ ನಾಯಕರು, ಬರ ಮತ್ತು ಸಾಲ ಮನ್ನಾ ಕುರಿತಂತೆ ಮಾಡಿರುವ ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಎಲ್ಲ ದೃಷ್ಟಿಯಲ್ಲಿಯೂ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.  ರೈತರ ಸಾಲ ಮನ್ನಾ ಯೋಜನೆಯ ಬಗ್ಗೆ ಯಾವುದೇ ಅಪ ನಂಬಿಕೆ ಬೇಡ. ರಾಜ್ಯ ಸರ್ಕಾರವು ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿರ್ದಿಷ್ಟ ಆದೇಶಗಳನ್ನು ಹೊರಡಿಸಿದೆ ಎಂದು ಅವರು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಬೇಬಾಕಿ ಪತ್ರ ನೀಡದಿದ್ದರೂ ರಾಜ್ಯ ಸರ್ಕಾರವೇ ಸಾಲ ಮನ್ನಾ ವ್ಯಾಪ್ತಿಗೆ ಎಲ್ಲ ರೈತರಿಗೂ ಬೇಬಾಕಿ ಪತ್ರವನ್ನು ವಿತರಿಸಲಿದೆ.  ಈ ಬೇಬಾಕಿ ಪತ್ರದ ಮೂಲಕ ರೈತರು ಮುಂದಿನ ಹಂಗಾಮಿಗೆ ಸಾಲ ಪಡೆಯಲು ಅರ್ಹತೆ ಪಡೆಯುತ್ತಾರೆ. ಸಾಲ ಮನ್ನಾ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಕೋಶ ರಚಿಸಲಾಗಿದೆ.  ಈ ತಂಡವು ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ, ಸಾಫ್ಟ್ ವೇರ್ ಒಂದನ್ನು ಸಿದ್ಧಪಡಿಸಿದ್ದು ರೈತರ ಸಾಲ ಮನ್ನಾ ವ್ಯಾಪ್ತಿಗೆ ಬರುವ ರೈತರಿಂದ ಈಗಾಗಲೇ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಸಾಫ್ಟ್ ವೇರ್ ಗೆ ರೈತರು ಕೇವಲ ಅವರ ಆಧಾರ್, ಪಹಣಿ ಮತ್ತು ರೇಷನ್ ಕಾರ್ಡಿನ ಪ್ರತಿಗಳನ್ನು ಮಾತ್ರ ಒದಗಿಸಬೇಕು. ಉಳಿದ ಎಲ್ಲ ಮಾಹಿತಿಯನ್ನೂ ಬ್ಯಾಂಕುಗಳೇ ಭರ್ತಿ ಮಾಡುತ್ತವೆ.  ಸಾಲಮನ್ನಾ ಸೌಲಭ್ಯವನ್ನು ಅನರ್ಹರು ಪಡೆಯುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗುತ್ತಿದೆ  ಎಂದರು.
 ಸಾಲ ಮನ್ನಾ ಯೋಜನೆಯನ್ನು ಜಾರಿ ಮಾಡಿದಾಕ್ಷಣ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ಇದೊಂದು ಕಾಲಾವಧಿಯ ಕಾರ್ಯಕ್ರಮವಾಗಿರುತ್ತದೆ.
ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಾಡಿದ ಸಾಲಮನ್ನಾ ಬಾಕಿಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಬ್ಯಾಂಕುಗಳಿಗೆ ಮರುಪಾವತಿ ಮಾಡಿದ್ದರು. ಅದೇ ರೀತಿ ಸಿದ್ದರಾಮಯ್ಯ ಅವರು ಸರ್ಕಾರ ಡಿಸೆಂಬರ್, 2017 ರಲ್ಲಿ ಮಾಡಿದ ಸಾಲ ಮನ್ನಾ ಯೋಜನೆಯ ಬಾಕಿಯನ್ನು ನಮ್ಮ ಮೈತ್ರಿ ಸರ್ಕಾರ ಮರುಪಾವತಿಸಿದೆ. ಈ ಪ್ರಸಕ್ತ ಸಾಲಿನಲ್ಲಿ ರೈತರ ಸಾಲ ಮನ್ನಾ ಯೋಜನೆಗೆ 6500 ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿದೆ. ಈಗಾಗಲೇ ಸಹಕಾರಿ ಬ್ಯಾಂಕುಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನವೆಂಬರ್ ಮಾಹೆಯ ಮೊತ್ತವನ್ನು ಪಾವತಿಸಲಾಗಿದೆ. ಪ್ರತಿ ತಿಂಗಳೂ ಬ್ಯಾಂಕುಗಳಿಗೆ ಹಣ ಜಮೆಯಾಗುತ್ತದೆ. ಅರ್ಹ ರೈತರಿಗೆ ಮಾತ್ರ ಸಾಲ ಮನ್ನಾ ಲಾಭ ದೊರಕಬೇಕೆಂಬುದು ಮೈತ್ರಿ ಸರ್ಕಾರದ ಆಶಯ ಎಂದು ಸಿಎಂ ಹೇಳಿದರು.
ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕುಡಿಯುವ ನೀರಿನ ಸಂಬಂಧದಲ್ಲಿ ಸ್ಪಷ್ಟ ಸೂಚನೆ ನೀಡಿ ಯಾವುದೇ ಲೋಪ ಬಾರದ ಹಾಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗೆ ಈಗಾಗಲೇ  1 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಬರಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿಗಳ ಕುರಿತು ಸಭೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ.  ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ವಿವಿಧ ಜಿಲ್ಲೆಗಳ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಬರ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ಪಕ್ಷಗಳ ಶಾಸಕರು ಒಗ್ಗೂಡಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು ಅವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button