Latest

ಸಿದ್ದಗಂಗಾ ಶ್ರೀ ಅಂತ್ಯಕ್ರಿಯೆ ವೇಳೆ ಲೇಡಿ ಎಸ್ಪಿ ನಿಂದಿಸಿದರಾ ಸಚಿವ ಸಾ.ರಾ.ಮಹೇಶ್?

 

 

    ಪ್ರಗತಿವಾಹಿನಿ ಸುದ್ದಿ, ತುಮಕೂರು

ಸಿದ್ದಗಂಗಾ ಶ್ರೀ ಸಮಾಧಿ ಕ್ರಿಯೆ ವೇಳೆ ಗದ್ದುಗೆ ಬಳಿ ತೆರಳಲು ತಡೆದರೆನ್ನುವ ಕಾರಣಕ್ಕೆ ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಲೇಡಿ ಎಸ್ಪಿ ದಿವ್ಯಾ ಗೋಪಿನಾಥ್ ಅವರನ್ನು ಅವಾಚ್ಯವಾಗಿ ನಿಂದಿಸಿದರೆನ್ನುವ ವಿಚಾರ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಗದ್ದುಗೆ ಬಳಿ ಕೇವಲ 30 ಜನರನ್ನು ಬಿಡುವಂತೆ ಹಿರಿಯ ಅಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ, ಆ ಪಟ್ಟಿಯಲ್ಲಿ ಹೆಸರಿಲ್ಲದ ಸಚಿವ ಸಾ.ರಾ.ಮಹೇಶ ಅವರನ್ನು ಎಸ್ಪಿ ದಿವ್ಯಾ ಗೋಪಿನಾಥ ತಡೆದಿದ್ದಾರೆ. ಇದರಿಂದ ಕೆರಳಿದ ಮಹೇಶ್ ಕೆಂಡಾ ಮಂಡಲರಾಗಿ, ನಾನು ಸಚಿವ ಎನ್ನುವುದು ಗೊತ್ತಿಲ್ವಾ, ಬ್ಲಡಿ ಲೇಡಿ ಎಂದು ಬೈದರು ಎಂದು ಆರೋಪಿಸಲಾಗಿದೆ.

ಈ ವೇಳೆ ಸಚಿವರು ತಿರುಗಿ ತಿರುಗಿ ಬೈಯ್ಯುತ್ತ ಹೋಗುವುದು ಮತ್ತು ದಿವ್ಯಾ ಕಣ್ಣಿರು ಒರೆಸುತ್ತ ಪಕ್ಕಕ್ಕೆ ಸರಿದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ ಸಚಿವರ ಜೊತೆಗಿದ್ದವರು ಮತ್ತು ಕೆಲವು ಪೊಲೀಸ್ ಅಧಿಕಾರಿಗಳು ದಿವ್ಯಾ ಅವರ ಹೆಗಲ ಮೇಲೆ ಕೈ ಹಾಕಿ ಸಮಾಧಾನಪಡಿಸುವ ದೃಷ್ಯವೂ ಸೆರೆಯಾಗಿದೆ.

ಈ ಪ್ರಕರಣ ವಿವಾದಕ್ಕೊಳಗಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಿಗೆ ಅವಮಾನವಾದರೆ ನನಗೇ ಆದಂತೆ. ಯಾರ್ಯಾರನ್ನೋ ಒಳಗೆ ಬಿಡುವ ಅಧಿಕಾರಿಗಳು ಮಂತ್ರಿಗಳನ್ನು ಒಳಗೆ ಬಿಡದಿರುವುದು ತಪ್ಪು. ಪ್ರಕರಣವನ್ನು ನಾನು ಅಲ್ಲಿಯೇ ಮುಗಿಸಿದ್ದೇನೆ  ಎಂದಿದ್ದಾರೆ.

ಪ್ರತಿಕ್ರಿಯೆ ನೀಡಿರುವ ಸಚಿವ ಸಾ.ರಾ.ಮಹೇಶ, ಜನಾರ್ದನ ರೆಡ್ಡಿ  ಅಂತವರನ್ನು ಒಳಗೆ ಬಿಟ್ಟಿದ್ದಾರೆ. ನನ್ನನ್ನು ತಡೆದಿದ್ದಾರೆ. ಆಗ ಅವರಿಗೆ ಬುದ್ದಿ ಹೇಳಿದ್ದು ನಿಜ. ಅವಾಚ್ಯವಾಗಿ ಬಯ್ದಿಲ್ಲ ಎಂದಿದ್ದಾರೆ. 

ನಾನು ಅಲ್ಲೇ ಇದ್ದೆ. ಇಂತಹ ಕಾರ್ಯಕ್ರಮದಲ್ಲಿ ಸಣ್ಣ ಪುಟ್ಟ ಘಟನೆ ಆದರೆ ಅದನ್ನೇ ದೊಡ್ಡದು ಮಾಡಬಾರದು. ನಾನು, ಸಿಎಂ ಅಲ್ಲೇ ಮುಗಿಸಿದ್ದೇವೆ ಎನ್ನುತ್ತಾರೆ ಮಾಜಿ ಸಚಿವ ವಿ.ಸೋಮಣ್ಣ.

ಒಟ್ಟಾರೆ ಈ ಪ್ರಕರಣ ಈಗ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಹಗಲು ರಾತ್ರಿ ನಿದ್ದೆ ಬಿಟ್ಟು ಕೆಲಸ ಮಾಡಿದ ಪೊಲೀಸ್ ಅಧಿಕಾರಿಗಳ ಮನೋಸ್ಥೈರ್ಯ ಕುಂದಿಸುವ ಕೆಲಸ ಸಚಿವರಿಂದ ಆಯಿತೇ ಎನ್ನುವ ಪ್ರಶ್ನೆ ಮೂಡಿದೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button