Latest

ಸುರೇಶ ಅಂಗಡಿ ಈ ಬಾರಿ ಮಂತ್ರಿಯಾಗುವುದು ಖಚಿತ -ಅಭಯ್ ಪಾಟೀಲ

ಬೆಳಗಾವಿಯ ವಿವಿಧೆಡೆ ಅಂಗಡಿ ಚಾಯ್ ಪೇ ಚರ್ಚಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ 
ಆರ್ಥಿಕವಾಗಿ ಹಿಂದುಳಿದ  ಮೇಲ್ವರ್ಗದವರಿಗೆ ಶೇಕಡಾ 10 ರಷ್ಟು ಮೀಸಲಾತಿ ಕೊಟ್ಟ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬೆಳಗಾವಿ ಬಿಜೆಪಿ ಸಂಸದ ಸುರೇಶ್ ಅಂಗಡಿ ಹೇಳಿದರು.
ಇಲ್ಲಿನ ಚಿದಂಬರ ನಗರ ಹಾಗೂ ರಾಘವೇಂದ್ರ ಕಾಲನಿಗಳಲ್ಲಿ ಇಂದು ಚಾಯ್ ಪೇ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗದ ಜನರಿಗೆ ಮೀಸಲಾತಿ ತರಬೇಕಾದರೆ ಮೋದಿ ಸರ್ಕಾರ ಎಷ್ಟು ಶ್ರಮವಹಿಸಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಧಾನಿ ಮೋದಿಯವರು ಉಳಿದ ವರ್ಗದ ಮೀಸಲಾತಿಯನ್ನು ಕಡಿತಗೊಳಿಸಲು ಹೋಗಲಿಲ್ಲ. ಬದಲಾಗಿ ಸಬಕೆ ಸಾತ್ ಸಬ್ ಕಾ ವಿಕಾಸ್ ಎನ್ನುವ  ಧ್ಯೇಯದಲ್ಲಿ ಎಲ್ಲವನ್ನು ಮಾಡಿದರು ಎಂದು ಹೇಳಿದರು.
ಮೋದಿ ಸರ್ಕಾರದ ಕಳೆದ 5 ವರ್ಷದ ಅವಧಿಯಲ್ಲಿ ಹಿಂದಿನ ಯಾವ ಸರ್ಕಾರಗಳೂ ಮಾಡದಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ಅವುಗಳಲ್ಲಿ ಆಯುಷ್ಮಾನ ಭವ ಎನ್ನುವುದು ಸೇರಿದಂತೆ ಗ್ಯಾಸ್ ಸಿಲೆಂಡರ್ ವಿತರಣೆ ಮತ್ತಿತರ ಯೋಜನೆಗಳು ಸೇರ್ಪಡೆಯಾಗಿವೆ ಎಂದು ಹೇಳಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ, ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿಗೆ ಕಳೆದ ಬಾರಿ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸುಮಾರು 66 ಸಾವಿರ ಮತಗಳು ಬಂದಿದ್ದವು. ಈ ಬಾರಿ ಎಲ್ಲರ ಸಹಕಾರದಿಂದ ಇನ್ನೂ ಹೆಚ್ಚಿನ ಮತಗಳು ಬಿಜೆಪಿಗೆ ಬರುತ್ತವೆ ಎಂದು ಹೇಳಿದರು.
ಕೇಂದ್ರದ ಮುಂದಿನ ಮೋದಿ ಸರಕಾರದಲ್ಲಿ ಸಂಸದ ಸುರೇಶ್ ಅಂಗಡಿ ಮಂತ್ರಿಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಚಾರ್ಯ ವಿ. ಎಂ.ಜೋಶಿ  ಮಾತನಾಡಿ, ನಾನು ಕಂಡಂತೆ ಅತ್ಯಂತ ನೇರ ನುಡಿಯ ರಾಜಕಾರಣಿಗಳಲ್ಲಿ ಸಂಸದ ಅಂಗಡಿಯವರೂ ಒಬ್ಬರು. ಹೀಗಾಗಿ ಈ ಬಾರಿಯೂ ಕೂಡ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿ ಕಾನೂನು ಮಂತ್ರಿಯಾಗಲಿ ಎಂದು ಶುಭ ಹಾರೈಸಿದರು.
ಡಾ. ಅರುಣಾ ನಾಯ್ಕ ಅವರು ಮೋದಿ ದೇಶದ ಹೆಮ್ಮೆ ಎಂದರು. ಬ್ರಾಹ್ಮಣ ಸಮಾಜದ ಮುಖಂಡ ಅರವಿಂದ ಹುನಗುಂದ, ನ್ಯಾಯವಾದಿ ಡಿ.ಬಿ. ಜೋಶಿ, ಆನಂದ ಪಾಟೀಲ, ಸಚಿನ್ ಕುಲಕರ್ಣಿ, ರಾಜಶ್ರೀ ಹೆಗಡೆ, ಕಾಂತಾ ಗ್ರಾಮೋಪಾಧ್ಯೆ, ಸುನಿತಾ ಪಾಟೀಲ, ಪೂರ್ಣಿರ್ಮಾ ಕುಲಕರ್ಣಿ, ಶಿಲ್ಪಾ ಕುಲಕರ್ಣಿ, ಸ್ನೇಹಾ ಜೋಶಿ ಮತ್ತಿತರರು ಉಪಸ್ಥಿತರಿದ್ದರು. ವಾಣಿ ಜೋಶಿ ಸ್ವಾಗತಿಸಿ, ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button