ಸತ್ಯ ಘಟನೆ ಆಧರಿಸಿದ ಕಥೆ
ಪೂರ್ಣಿಮಾ ಹೆಗಡೆ
ಸುಮಾರು ಮೂರು ತಿಂಗಳಾಗಿರಬಹುದು ವಿಜಯಾ ತವರು ಮನೆಗೆ ಬಂದು. ಮಗಳನ್ನು ಬಿಟ್ಟು ಬಂದಿದ್ದಾಳೆ. ಅವಳಿಗೆ ಸ್ಕೂಲಿದೆಯಲ್ಲ. ಬೇಜಾರು ಅಂದ್ರೆ,,, ತುಂಬಾ ಬೇಜಾರು. ಅಪ್ಪಾನೂ ಇತ್ತೀಚೆಗೆ ತುಂಬಾ ಸಿಡುಕುತ್ತಾರೆ. ಅಮ್ಮ ಕಣ್ಸನ್ನೆಯಿಂದಲೇ ಅವರನ್ನು ಸುಮ್ಮನಿರಿಸುವ ಪ್ರಯತ್ನ ಮಾಡುತ್ತಾರೆ. ಗಂಡ ಮೋಹನ ಫೋನೇ ಮಾಡ್ತಾ ಇಲ್ಲ. ತಾನೇ ಮಾಡಿದರೆ ಯಾವಾಗಲೂ ವ್ಯಸ್ತ. ರಾತ್ರಿ ಮಾಡಬೇಕೆಂದರೆ ತನಗೆ ಎಂಟು ಗಂಟೆಗೆಲ್ಲಾ ಹಾಳಾದ ನಿದ್ದೆ. ಮಾವನಿಗೆ ಫೋನ್ ಮಾಡಿದರೆ ಹೇಳ್ತೇನಮ್ಮ ಅಂತಾರೆ, ಮಗಳ ಜೊತೆ ಕೂಡ ಮಾತನಾಡಲಾಗುತ್ತಿಲ್ಲ. ಏನಾಗಿದೆ?
ವಿಜಯಾ ಬಿಕಾಂ ಪದವೀಧರೆ. ತುಂಬಾ ಮುದ್ದು. ಬಾಯಿ ಪಾಠ ಮಾಡಿಯೇ ಫಸ್ಟ್ ಕ್ಲಾಸ್ ಪಾಸಾಗಿದ್ದಾಳೆ. ಪುಣಾದಲ್ಲಿರುವ ಸಾಫ್ಟ್ ವೇರ್ ಇಂಜನಿಯರ್ ಮೋಹನನ ಜೊತೆ ಮದುವೆ. ಕೈತುಂಬಾ ಸಂಬಳ, ಸ್ವಂತ ಫ್ಲಾಟ್, ಗಾಡಿ, ಬೇಕೆನಿಸಿದಾಗ ಬೇಕಾದಲ್ಲಿ ತಿರುಗಾಟ. ಬದುಕು ಹೂವಿನ ಹಾಸಿಗೆಯೇ ಆಗಿತ್ತು. ತನಗೆ ಇಷ್ಟು ಸುಂದರ ಬದುಕು ಕೊಟ್ಟ ಮೋಹನನಿಗೊಂದು ಗಂಡು ಮಗುವನ್ನ ಕೊಡಬೇಕೆಂಬುದು ಅವಳ ಮಹದಾಸೆಯಾಗಿತ್ತು.
ಮೊದಲನೆಯ ಹೆರಿಗೆ ತವರಲ್ಲಾಯಿತು, ಹೆಣ್ಣು ಮಗು. ವಿಜಯಾ ತುಂಬಾ ಡಲ್ ಆಗಿರತೊಡಗಿದಳು. ಆ ಮನಸ್ಥಿತಿಯಲ್ಲಿರುವ ಅವಳನ್ನ ಮೋಹನ ಹೊರಗಡೆ ಕರೆದು ಕೊಂಡು ಹೋಗುತ್ತಿರಲಿಲ್ಲ. ತಾನು ಹೆಚ್ಚು ಹೆಚ್ಚು ಮನೆಯಿಂದ ಹೊರಗಿರಲಾರಂಭಿಸಿದ. ಗಂಡುಮಗು ಕೊಡಲಿಲ್ಲ ಎನ್ನುವ ಬೇಸರವಿರಬೇಕು ಅಂದುಕೊಂಡಳು ವಿಜಯಾ. ಮತ್ತಷ್ಟು ಮೌನ, ಮತ್ತಷ್ಟು ಒಂಟಿತನ.
ಹೀಗಿರುವಾಗಲೇ ಮತ್ತೊಂದು ಮಗುವಾಯಿತು. ಹೆರಿಗೆ ಪೂಣಾದಲ್ಲೇ ಆಯಿತು. ಗಂಡುಮಗು, ಗರ್ಭದಲ್ಲೇ ಸತ್ತು ಹೋಗಿತ್ತು. ಅವಳ ಮನಸ್ಸು ಒಪ್ಪಲೇ ಇಲ್ಲ. ಮಗು ಬದುಕಿರುವಂತೇ ಭಾವನೆ. ಪೂರ್ತಿಯಾಗಿ ಮೊದಲಿನಂತಾದಳು. ಪ್ರತಿಯೊಂದು ಕೆಲಸವೂ ಅಚ್ಚುಕಟ್ಟು, ಲವಲವಿಕೆ ಆದರೆ ಆ ಸತ್ತ ಮಗು ಇದ್ದಂಥ ಭಾವನೆಯಿಂದ ಅದರ ಲಾಲನೆ ಪೋಷಣೆ. ಬಂದವರೆದುರು ಇರುಸು ಮುರುಸಾಗ ತೊಡಗಿತು. ಬುದ್ದಿ ಹೇಳಿ ಸೋತು ಹೋದರು ಮನೆ ಜನ. ತಾಳಲಾರದೆ ಮನೋವೈದ್ಯರಿಗೆ ತೋರಿಸಿದ ಮೋಹನ.
ಮದುವೆ ಎಂದರೇನು? ಸಂಬಂಧವೇ? ವ್ಯವಹಾರವೇ? ಲೆಕ್ಕಾಚಾರವೇ? ಬಂಧನವೇ? ಬಾಂಧವ್ಯವೇ? ಜವಾಬ್ದಾರಿಯೇ?
ಔಷಧ ತೆಗೆದುಕೊಂಡಷ್ಟು ಹೊತ್ತು ತುಂಬಾ ನಿದ್ದೆ, ನಂತರ ಒಂದಷ್ಟು ಹೊತ್ತು ನಿದ್ದೆಯ ಅಮಲು, ನಂತರ ಇಡೀದಿನ ಅನ್ಯಮನಸ್ಕತೆ ಮತ್ತೆ ಔಷಧ. ವೈದ್ಯರ ಬಳಿ ಮಾತನಾಡಿ ಮಾತ್ರೆಯ ಡೋಸೇಜ್ ಹೆಚ್ಚಿಸತೊಡಗಿದ ಮೋಹನ.
ಹೀಗಿರುವಾಗೊಮ್ಮೆ ಅವಳ ಬಟ್ಟೆ ಬರೆಗಳನ್ನ ತುಂಬಿಸಿ ಬೆಳಗಾವಿ ತವರು ಮನೆಗೆ ತಂದು ಬಿಟ್ಟ. ಸ್ವಲ್ಪ ದಿನ ರೆಸ್ಟ್ ಮಾಡು ದೀಪಾವಳಿಗೆ ಬರುತ್ತೇನೆಂದ. ಅವಳ ಔಷಧಿಯ ಡೋಸೇಜ್ ನೋಡಿದ ಇಲ್ಲಿಯ ವೈದ್ಯರು ಹೌಹಾರಿದರು.
ಮೋಹನ ಕಾಲ್ ಕೂಡ ಮಾಡಲಿಲ್ಲ, ಮಗಳ ಸಂಪರ್ಕವೇ ಇಲ್ಲ. ಈಗೀಗ ಮಗುವನ್ನ ಕಳೆದುಕೊಂಡ ಅರಿವಾಗುತ್ತಿತ್ತು, ಅಳುತ್ತಿದ್ದಳು.
ದೀಪಾವಳಿಗೆ ಗಂಡನ ಮನೆಗೆ ಹೋಗುವ ಸಂಭ್ರಮದಲ್ಲಿರುವಾಗ ವಿವಾಹ ವಿಚ್ಛೇದನದ ನೋಟೀಸ್ ಬಂತು. ಇದು ಮಗುವನ್ನು ಕಳೆದು ಕೊಂಡಿರುವುದಕ್ಕಿಂತ ದೊಡ್ಡ ಆಘಾತ. ಮನಸ್ಸು ಒಪ್ಪಲಿಲ್ಲ. ಯಾಕೆ ಎಂದೇ ತಿಳಿಯಲಿಲ್ಲ. ತಾನವನನ್ನ ಪ್ರೀತಿಸ್ತೇನೆ, ಅವನೂ ಕೂಡ. ಮುಂದಿನ ಕಾರವಾಹಿಗಳು ನಡೀತಾನೇ ಇತ್ತು. ಒಮ್ಮೆ ನನ್ನ ಜೊತೆ ಮಾತನಾಡಿಸಿ ಮೋಹನನಿಗೆ ಅಂತ ಅವನ ವಕೀಲರಿಗೆ ಅಂಗಲಾಚಿದಳು. ಸರಿ ದಿನ ನಿಗದಿಯಾಯಿತು. ಮಾತನಾಡಲು ಬಂದವನು ಖಾಲಿ ಚೆಕ್ ಗೆ ಸಹಿ ಹಾಕಿ ಅವಳ ಮುಂದಿಟ್ಟ. ಪ್ರಮೋಷನ್ ಪ್ಯಾಕೇಜ್ಗಳ ಅಮಲಿನಲ್ಲಿರುವ ಮೋಹನ ಯಾವ ಬೆಲೆ ತೆತ್ತಾದರೂ ಅವಳಿಂದ ವಿಚ್ಛೇದನ ಪಡೆಯಲು ತಯಾರಾಗಿದ್ದ. ತಂದೆಯ ಮುಖ ನೋಡಿದಳು. ಕಣ್ಗಳು ಮಿಂಚುತ್ತಿದ್ದವು.
ತಡಮಾಡದೆ ವಕೀಲರು ತೋರಿಸದಲ್ಲೆಲ್ಲಾ ಸಹಿ ಮಾಡಿದಳು. ಅಪ್ಪ ಚೆಕ್ ತಗೊಳ್ಳಿ ಅಂದವಳು ಹೊರಬಂದಳು.
ಕೈಯಲ್ಲಿರುವ ನೀರಿನ ಬಾಟಲ್ ನ್ನೇ ಮಗುವೆಂದು ಸಂತೈಸುತ್ತಾ “ನಿನಗೇನಾದರೂ ಹೀಗಾಗಿದ್ದರೆ ನಾನು ನಿನ್ನನ್ನೂ ಮಗುವಿನಂತೆ ನೋಡಿಕೊಳ್ಳುತ್ತಿದ್ದೆ,,,,, ಮೂರು ಮಕ್ಕಳು ಎಂದು ಕೊಳ್ಳುತ್ತಿದ್ದೆ,,,,,, ಡಾಕ್ಟರ್ ಬಳಿ ತೋರಿಸುತ್ತಿರಲಿಲ್ಲ,,,,,,, ನಾನೇ ಪ್ರೀತಿಯಿಂದ ಗುಣ ಪಡಿಸುತ್ತಿದ್ದೆ,,,,,,, ಯಾಕೆಂದರೆ,,,,, ನೀನು ನನ್ನವನಲ್ವಾ,,,,,, ಇತ್ಯಾದಿ ಇತ್ಯಾದಿ,,,,, ಮೋಹನನ ಕಿವಿಗೆ ಬೀಳಲಿಲ್ಲ ಅವನು ತುಂಬಾದೂರವಾಗಿದ್ದ.
(ಲೇಖಕಿ ಹಿರಿಯ ನ್ಯಾಯವಾದಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ