Latest

ಕಸದ ಗುತ್ತಿಗೆ ನಿರ್ವಹಣೆ ಆಕ್ರಮ: ಎಸಿಬಿಯಿಂದ ತನಿಖೆಗೆ ಆದೇಶ


    ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ

ಬೆಂಗಳೂರು ಮಹಾನಗರ ಪಾಲಿಕೆಯ ಹದಿನೇಳನೇ ವಾರ್ಡಿನ ಕಸದ ಗುತ್ತಿಗೆ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪದ ಸಮಗ್ರ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ ಅವರು ಬುಧವಾರ ಸದನಕ್ಕೆ ತಿಳಿಸಿದರು.
ರಾಜ್ಯ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಬೆಂಗಳೂರು ಮಹಾನಗರ ಪಾಲಿಕೆಯ ಹದಿನೇಳನೇ ವಾರ್ಡ್‌ನ ಕಸದ ಗುತ್ತಿಗೆ ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ಸ್ಥಳೀಯ ಶಾಸಕರು ತಮ್ಮ ಗಮನಕ್ಕೆ ತಂದಿದ್ದಾರೆ. ಈ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಂದ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಗುತ್ತಿಗೆ ನಿರ್ವಹಣೆಯಲ್ಲಿ ಆಕ್ರಮ ನಡೆದಿರುವ ಕುರಿತಂತೆ ಮಹಾನಗರ ಪಾಲಿಕೆಯ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತಾರೆ.
ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಿ ರಾಜ್ಯ ಸರ್ಕಾರವು ಇದೇ ನವೆಂಬರ್ ೨೪ ರಂದು ಆದೇಶ ಹೊರಡಿಸಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಲು ಆಯುಕ್ತರಿಗೆ ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಸದಸ್ಯರಾಗಲೀ ಅಥವಾ ಅಧಿಕಾರಗಳಿರಲೀ ತಪ್ಪಿಸ್ಥರು ಎಂದು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪರಮೇಶ್ವರ್ ಭರವಸೆ ನೀಡಿದರು.
ಈಗಿರುವ ದಾಖಲೆ ಅನ್ವಯ ಪ್ರಕರಣದ ಪ್ರಮುಖ ಆರೋಪಿ ಎಂದು ಪರಿಗಣಿಸಿರುವ ಗುತ್ತಿಗೆದಾರ ಮೆ|| ಓಂ ಎಸ್.ಎಲ್.ವಿ ಕನ್ಸ್‌ಟ್ರಕ್ಷನ್ಸ್ ಮಾಲೀಕ ವೆಂಕಟೇಶ್ ಅವರ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮಹಾನಗರ ಪಾಲಿಕೆಯಿಂದ ಮೊಕದ್ದಮೆ ದಾಖಲಿಸಿದ್ದು ಕ್ರಿಮಿನಲ್ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ಸಭಾಧ್ಯಕ್ಷರು ಸಿಡಿ-ಮಿಡಿ: ಕಸದ ಗುತ್ತಿಗೆ ನಿರ್ವಹಣೆಯಲ್ಲಿ ಆಕ್ರಮ ನಡೆದಿರುವ ಕುರಿತ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ ನೀಡುವ ದಾಖಲೆಯಲ್ಲಿ ಆರೋಪಿತ ವ್ಯಕ್ತಿಯನ್ನು ಪ್ರಕರಣದ ಪ್ರಮುಖ ರೂವಾರಿ ಎಂದು ಪರಿಗಣಿಸಿ ದೂರು ದಾಖಲಿಸಿದೆ ಎಂದು ನಮೂದಿಸಿದ ಅಧಿಕಾರಿಗಳ ವಿರುದ್ಧ ಸಭಾಧ್ಯಕ್ಷ ರಮೇಶ ಕುಮಾರ ಅವರು ಸದನದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಬ್ದಗಳ ಬಳಕೆಯಲ್ಲಿ ಎಚ್ಚರವಿರಲಿ ಅತ್ಯುನ್ನತ ಸಾಧಕರಿಗೆ ಬಳಸುವ ಪದವನ್ನು ಒಬ್ಬ ಆರೋಪಿಗೆ ವಿಶೇಷಣವಾಗಿ ಬಳಸಿದ್ದೀರಿ. ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನವಿಲ್ಲವೇ ? ಇನ್ನೊಮ್ಮೆ ಈ ರೀತಿ ಪುನರಾವರ್ತನೆಯಾದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button