ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ ಮಧ್ಯೆ ನಡೆಯುತ್ತಿರುವ ಕೀಳು ಮಟ್ಟದ ವಾಕ್ ಸಮರ ಕಾಂಗ್ರೆಸ್ ನಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.
ಲಿಂಗಾಯತ ಧರ್ಮ ಹೋರಾಟದ ಸಂದರ್ಭದಲ್ಲಿ ಆರಂಭವಾಗಿರುವ ಇಬ್ಬರ ನಡುವಿನ ಜಗಳ ಈಗ ಬೀದಿ ಜಗಳವಾಗಿ ಮಾರ್ಪಟ್ಟಿದೆ. ಇಬ್ಬರೂ ಒಬ್ಬರನ್ನೊಬ್ಬರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದು, ಎಂ.ಬಿ.ಪಾಟೀಲ ಧರ್ಮ ಹೋರಾಟಕ್ಕೆ ಲಂಚದ ಹಣ ಬಳಸಿದ್ದಾರೆ ಎಂದು ಶಾಮನೂರು ಹೇಳಿದರೆ, ಶಾಮನೂರು ಭ್ರಷ್ಟಾಚಾರದಿಂದಲೇ ತಮ್ಮ ಸಂಸ್ಥೆಗಳನ್ನು ಕಟ್ಟಿದ್ದಾರೆ ಎಂದು ಎಂ.ಬಿ.ಪಾಟೀಲ ಆರೋಪಿಸಿದ್ದಾರೆ.
ಯಾರದ್ದೋ ಸಂಸ್ಥೆಯನ್ನು ಶಾಮನೂರು ಹೈಜಾಕ್ ಮಾಡಿದ್ದಾರೆ. ಅವರೊಬ್ಬ ದೊಡ್ಡ ಸ್ವಾರ್ಥಿ, ತಮ್ಮ ಕುಟುಂಬ ಬೆಳಸುವುದು ಬಿಟ್ಟು ಬೇರೆ ಅವರಿಗೆ ಗೊತ್ತಿಲ್ಲ ಎಂದು ಎಂ ಬಿ ಪಾಟೀಲ್ ಜರಿದರೆ, ಅವನೊಬ್ಬ ‘ಮಂಗ್ಯಾ’ ಎಂದು ಶಾಮನೂರು ತಿರುಗೇಟು ನೀಡಿದ್ದಾರೆ.
ಅವನೊಬ್ಬ ಸಣ್ಣ ಹುಡುಗ, ನಾನು ಅವರ ಹೆಸರನ್ನೇ ಎತ್ತಲಿಲ್ಲ. ಅವನೊಬ್ಬ ಮಂಗ, ಶತಮಾನಗಳ ಇತಿಹಾಸವಿರುವ ಲಿಂಗಾಯತ ಧರ್ಮದ ಬಗ್ಗೆ ಅವನಿಗೇನು ಗೊತ್ತು. ನಿನ್ನೆ ಮೊನ್ನೆ ಬಂದವನು ಅವನು ಎಂದು ಶಾಮನೂರು ಹೇಳಿದರೆ, ಮೋಸದಿಂದ ಪಡೆದುಕೊಂಡ ಬಾಪೂಜಿ ಸಂಸ್ಥೆಯ ಅಧಿಕಾರ, ಹಣ, ಅಮಲು ಅವರನ್ನು ಬಾಯಿಗೆ ಬಂದಂತೆ ಮಾತನಾಡಿಸುತ್ತಿದೆ. ನನ್ನ ಮೈಮೇಲೆ ತಂದೆಯ ರಕ್ತ ಹರಿಯುತ್ತಿದೆ, ನಾನು ಇನ್ನೂ ಹೆಚ್ಚು ಮಾತನಾಡಿದರೆ, ಶಾಮನೂರು ಕುಟುಂಬದ ಮರ್ಯಾದೆ ಹೋಗುತ್ತದೆ. ಯಾರಿಗೂ ಹೆದರುವಂತಹ ಸ್ವಭಾವ ನನ್ನದಲ್ಲ ಎಂದು ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ.
ಇಬ್ಬರ ಬೀದಿ ರಂಪದಿಂದಾಗಿ ಕಾಂಗ್ರೆಸ್ ತೀವ್ರ ಮುಜುಗರ ಅನುಭವಿಸುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ