Latest

ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾಗಳಿಂದ ದೇಶದ ಅಭಿವೃದ್ಧಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಸೇರಿದಂತೆ ಇನ್ನೂ ಹಲವಾರು ನೀತಿಗಳು ಆರ್ಥಿಕ ಬೆಳವಣಿಗೆಗೆ ಮಾತ್ರವಲ್ಲದೆ ದೇಶದ ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿವೆ ಎಂದು ಬೆಂಗಳೂರಿನ ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಐಐಎಂ) ನ ಪ್ರಾಧ್ಯಾಪಕ ಪ್ರೊ. ಶ್ರೀನಿವಾಸನ್ ಆರ್. ಹೇಳಿದರು.
ನಗರದ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನವು ದೇಶದ ಆಂತರಿಕ ಅಭಿವೃದ್ಧಿಯಲ್ಲಿ ಮತ್ತು ಪ್ರಮುಖ ಸವಾಲುಗಳನ್ನು ಎದುರಿಸಲು ಆಡಳಿತಕ್ಕೆ ಸಹಾಯ ಮಾಡುತ್ತದೆ. ಮಾನವ ತನ್ನ ಕೆಲಸಗಳಲ್ಲಿ ಗುರಿ ಮುಟ್ಟಲು ತನ್ನ ದಾರಿಯನ್ನು ಸುಗಮಗೊಳಿಸಲು ಹಾಗೂ ಪ್ರಯತ್ನಗಳನ್ನು ಕಡಿಮೆ ಮಾಡಲು ಹೊಸ ನಾವೀನ್ಯತೆಗಳು, ಸಂಶೋಧನೆಗಳು ನಡೆಯುತ್ತವೆ. ಡಿಜಿಟಲೀಕರಣ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. 
ಅಧ್ಯಕ್ಷತೆ ವಹಿಸಿದ್ದ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ ಎಂಬಿಎ ವಿಭಾಗದ ಕಾರ್ಯವನ್ನು ಪ್ರಶಂಸಿಸಿದರು. ಎಂಬಿಎ ವಿಭಾಗದ ಡೀನ್ ಪ್ರೊ. ಕೃಷ್ಣ ಶೇಖರಲಾಲ ದಾಸ್  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ ಜ್ಯೋತಿ ತಲರೇಜಾ ಪರಿಚಯಿಸಿದರು. ಪ್ರೊ. ವಿನಾಯಕ ಹೊಸಮನಿ ವಂದಿಸಿದರು. ಪ್ರೊ. ನೂಪುರ ವೇಶ್ನೆ ನಿರೂಪಿಸಿದರು. ಪ್ರಾಚಾರ್ಯ ಡಾ. ಎ.ಎಸ್. ದೇಶಪಾಂಡೆ, ಎಲ್ಲ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ಹಾಗೂ ಬೇರೆ ಸಂಸ್ಥೆಗಳಿಂದ ಆಗಮಿಸಿದ ಸುಮಾರು ೧೦೦ ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button