ಪ್ರಗತಿವಾಹಿನಿ ಸುದ್ದಿ, ನವದೆಹಲಿ
ದೆಹಲಿ ರಾಜ್ಯ ಸರಕಾರಿ ನೌಕರರಿಗೆ ಎನ್ ಪಿಎಸ್ ರದ್ಧು ಮಾಡಿ ಹಳೆಯ ಪಿಂಚಣಿ ಯೋಜನೆಯನ್ನೇ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.
2006ರ ನಂತರ ಸೇರ್ಪಡೆಗೊಂಡಿರುವ ನೌಕರರಿಗೆ ಜಾರಿಗೊಳಿಸಿರುವ ಎನ್ ಪಿಎಸ್ ಯೋಜನೆ ರದ್ಧುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕೆಂದು ರಾಷ್ಟ್ರದ ವಿವಿಧ ಭಾಗಗಳಿಂದ ಆಗಮಿಸಿ ಸಂಸತ್ ಚಲೋ ನಡೆಸಿದ ನೌಕರರನ್ನು ಉದ್ಧೇಶಿಸಿ ಅವರು ಈ ಭರವಸೆ ನೀಡಿದರು.
ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯ ಮಾಡಲು ಬಂದಿಲ್ಲ. ಮತ ಕೇಳುವುದಕ್ಕೂಬಂದಿಲ್ಲ. ರಾಷ್ಟ್ರದ ಸರಕಾರಿ ನೌಕರರಿಗೆ ಎನ್ ಪಿಎಸ್ ನಿಂದಾಗಿ ಬಹುದೊಡ್ಡ ಮೋಸವಾಗಿದೆ. ಇನ್ನು ಮುಂದೆ ನಾನು ನೌಕರರೊಂದಿಗೆ ಸೇರಿ ಇದರ ವಿರುದ್ದ ಹೋರಾಟ ಮಾಡುತ್ತೇನೆ. ದೆಹಲಿಯಲ್ಲಿ ಎನ್ ಪಿಎಸ್ ರದ್ಧು ಪಡಿಸುವುದಲ್ಲದೆ ರಾಷ್ಟ್ರಾದ್ಯಂತ ರದ್ಧುಪಡಿಸಲು ಕೇಂದ್ರ ಸರಕಾರದ ವಿರುದ್ಧವೂ ಹೋರಾಡುತ್ತೇನೆ ಎಂದು ಭರವಸೆ ನೀಡಿದರು.
ಸರಕಾರಿ ನೌಕರರನ್ನು ದುಃಖಕ್ಕೊಳಪಡಿಸಿ ರಾಷ್ಟ್ರ ನಡೆಸಲು ಸಾಧ್ಯವಿಲ್ಲ. ಇದನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳಬೇಕು ಎಂದ ಅವರು ಈ ಸಮಾವೇಶದಲ್ಲಿ ಮಾಧ್ಯಮದವರು ಪಾಲ್ಗೊಳ್ಳದ ಕುರಿತು ಟೀಕಾಪ್ರಹಾರ ಮಾಡಿದರು.
ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸಿದ್ದರು. ಕರ್ನಾಟಕದಲ್ಲಿ ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಎನ್ ಪಿಎಸ್ ರದ್ಧುಪಡಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ಚುನಾವಣೆಗೆ ಮುಂಚೆ ಹೇಳಿಕೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಈ ಬಗ್ಗೆ ಈವರೆಗೂ ನಿರ್ಧಾರ ತೆಗೆದುಕೊಂಡಿಲ್ಲ. 2-3 ಬಾರಿ ಪರಿಶೀಲಿಸುವ ಭರವಸೆಯನ್ನಷ್ಟೆ ನೀಡಿದ್ದಾರೆ. ರಾಜ್ಯದಲ್ಲೂ ನೌಕರರ ಪ್ರತಿಭಟನೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ