ಪ್ರಗತಿವಾಹಿನಿ ಸುದ್ದಿ, ಗೋಕಾಕ
೨೪/೭ ಕುಡಿಯುವ ನೀರಿನ ಯೋಜನೆಯಿಂದ ನಗರದ ಜನತೆಗೆ ಸರಿಯಾಗಿ ನೀರು ಸರಬಾಜು ಆಗದೆ ಪೈಪ್ ಲೈನ್ ಗಳಲ್ಲಿ ಗಾಳಿ ತುಂಬಿ ಮೀಟರ್ ತಿರುಗುತ್ತಿರುವುದರಿಂದ ಸಾರ್ವಜನಿಕರಿಗೆ ಬೃಹತ್ ಪ್ರಮಾಣದ ಬಿಲ್ಲು ಬರುತ್ತಿರುವುದನ್ನು ಖಂಡಿಸಿ ಶುಕ್ರವಾರ ಸಾರ್ವಜನಿಕರು, ನಗರಸಭೆ ಸದಸ್ಯರು ನಗರಸಭೆಯ ಕಾರ್ಯಾಲಯದ ಮುಂದೆ ಜೈನ್ ಕಂಪನಿ ಹಠಾವೋ, ಗೋಕಾಕ ಭಚಾವೋ ಎಂದು ಘೋಷಣೆ ಕೂಗುತ್ತ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕರವೇ ಅಧ್ಯಕ್ಷ ಕಿರಣ ಡಮಾಮಗರ ಮಾತನಾಡಿ, ಜೈನ್ ಇರಿಗೇಶನ್ ಕಂಪನಿಯವರು ೨೪ ಗಂಟೆಗಳ ಕಾಲ ನಿರಂತರ ನೀರು ಸರಬರಾಜು ಮಾಡುವುದಾಗಿ ಟೆಂಡರ್ ಪಡೆದು ಮಧ್ಯ ರಾತ್ರಿ ೧ಗಂಟೆಯ ಸಮಯದಲ್ಲಿ ನೀರು ಬಿಡುತ್ತಿದ್ದು ೨೪/೭ ಕುಡಿಯುವ ನೀರು ಯೋಜನೆ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಜೈನ್ ಇರಿಗೇಶನ್ ಕಂಪನಿಯವರು ಈ ಕಾಮಗಾರಿಯನ್ನು ಕೈ ಬಿಟ್ಟು ನಗರಸಭೆ ಸುಪರ್ದಿಗೆ ನೀಡಬೇಕೆಂದು ಆಗ್ರಹಿಸಿದರು.
ಪೌರಾಯುಕ್ತ ಎಮ್. ಎಚ್. ಅತ್ತಾರ ಮಾತನಾಡಿ, ಜೈನ್ ಇರಿಗೇಶನ್ ಕಂಪನಿ ೨೪/೭ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವಿಫಲದ ಕುರಿತು ಬೆಂಗಳೂರಿನ ಕೆಯುಐಡಿಸಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಿದ್ದು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ೨೪/೭ ಕುಡಿಯುವ ನೀರು ಸರಬರಾಜು ಕುರಿತು ಕಳೆದ ದಿ.೧೨ ರಂದು ಸಭೆ ನಡೆಸಿ ಸಾರ್ವಜನಿಕರ ಹಾಗೂ ನಗರಸಭೆ ಸದಸ್ಯರ ಅಹವಾಲುಗಳನ್ನು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸಿದ್ಧಪ್ಪ ಹುಚ್ಚರಾಯಪ್ಪಗೋಳ, ವಿಜಯಕುಮಾರ ಜತ್ತಿ, ಪ್ರಕಾಶ ಮುರಾರಿ, ಗಿರೀಶ ಖೋತ, ಜಯಾನಂದ ಹುಣಶ್ಯಾಳ, ಹರೀಶ ಬೂದಿಹಾಳ, ಬಸವರಾಜ ಆರೆನ್ನವರ, ಮುಖಂಡರಾದ ದುರ್ಗಪ್ಪ ಶಾಸ್ತ್ರಿಗೊಲ್ಲರ, ಬಸವರಾಜ ಸಾಯನ್ನವರ, ಮಲ್ಲಿಕಾರ್ಜುನ ಹೊಸಪೇಟ, ಬಸವರಾಜ ದೇಶನೂರ, ಅಬ್ದುಲವಹಾಬ ಜಮಾದಾರ, ಖತೀಬ, ಅಬ್ದುಲ್ ಸತ್ತಾರ ಶಭಾಶಖಾನ್ ಸೇರಿದಂತೆ ಅನೇಕರು ಇದ್ದರು.
ಸುಮಾರು ೧ಗಂಟೆಗಳ ಕಾಲ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಿರ್ಮಾಣವಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ