Latest

ನಿವೇಶನಗಳ ರಚನೆ, ಮಾರಾಟಕ್ಕೆ ಪ್ರಾಧಿಕಾರದ ಅನುಮೋದನೆ ಕಡ್ಡಾಯ


   ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ

ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿವೇಶಗಳನ್ನು ರಚಿಸಿ ಮಾರಾಟ ಮಾಡುವ ಮುನ್ನ ನಗರಾಭಿವೃದ್ಧಿ ಇಲಾಖಾ ವ್ಯಾಪ್ತಿಯ ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು. ಟಿ. ಖಾದರ್ ಅವರು ಬುಧವಾರ ಸದನದಲ್ಲಿ ಪ್ರಕಟಿಸಿದರು.
ಪ್ರಶ್ನೋತ್ತರ ವೇಳೆ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಯೋಜನಾ ಪ್ರಾಧಿಕಾರಗಳ ಅನುಮೋದನೆ ಪಡೆಯದೆ ನಿವೇಶನ ರಚನೆ ಹಾಗೂ ಕಟ್ಟಡ ನಿರ್ಮಾಣ ಮಾಡಿದರೆ ಅವುಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು.
ಬಡಾವಣೆಗಳನ್ನು ರಚಿಸುವ ಮುಂಚಿತವಾಗಿ ವಿನ್ಯಾಸದ ಅನುಮೋದನೆ ಪಡೆಯಬೇಕು ಇಲ್ಲವಾದರೆ ನಾಗರಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಗ್ರಾಮ, ಪಟ್ಟಣ ಹಾಗೂ ನಗರಗಳ ಯೋಜಿತ ಬೆಳವಣಿಗೆಗೆ ಉಂಟಾಗುವ ತೊಡಕನ್ನು ನಿವಾರಿಸಲು ಕಳೆದ ೨೦೧೭ ರ ಮಾರ್ಚ ತಿಂಗಳಲ್ಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಖಾದರ್ ಅವರು ವಿವರಿಸಿದರು.
ಶಾಸಕರಾದ ಅಮರೇಗೌಡ ಬಯ್ಯಾಪೂರ, ಕೆ.ಜಿ ಬೋಪಯ್ಯ ಸೇರಿದಂತೆ ಹಲವು ಶಾಸಕರು ಈ ನಿಯಮದಿಂದ ಹಳೆಯ ಕಟ್ಟಡಗಳ ನವೀಕರಣ ಹಾಗೂ ಮಾರಾಟಕ್ಕೆ ತೀವ್ರ ತೊಂದರೆಯಾಗಿದೆ. ಹೊಸ ಬಡಾವಣೆ ರಚನೆಗೆ ಈ ನಿಯಮ ಅಳವಡಿಸಿ ಹಳೆಯ ಕಟ್ಟಡಗಳ ನವೀಕರಣ ನಿವೇಶ ಮಾರಾಟಕ್ಕೆ ಈ ನಿಯಮ ಅಳವಡಿಸುವುದು ಬೇಡ ಎಂದು ಮನವಿ ಮಾಡಿಕೊಂಡರು.
ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು ಈ ಕುರಿತಂತೆ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button