ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಡಾ. ಕೋಡ್ಕಣಿ ಕಣ್ಣಿನ ಕೇಂದ್ರದ ಹೊಸ ಶಾಖೆ ನಗರದ ಅಯೋಧ್ಯಾ ನಗರದಲ್ಲಿ ನಿರ್ಮಾಣವಾಗಿರುವ ಹೊಸ ಕಟ್ಟಡದಲ್ಲಿ ಫೆ.೧೦ ರಂದು ಉದ್ಘಾಟನೆಗೊಳ್ಳಲಿದೆ ಎಂದು ಡಾ. ಶಿಲ್ಪಾ ಕೋಡ್ಕಣಿ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ಹುಬ್ಬಳ್ಳಿಯ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಚೇರಮನ್ ಪದ್ಮಶ್ರೀ ಡಾ. ಎಂ.ಎಂ. ಜೋಶಿ, ನಟ ಹಾಗೂ ನಿರ್ದೇಶಕ ಮೃಣಾಲ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪ್ರಥಮವಾಗಿ ೨೦೦೦ನೇ ಇಸ್ವಿಯಲ್ಲಿ ಮಾರುತಿ ಗಲ್ಲಿಯಲ್ಲಿ ಕೋಡ್ಕಣಿ ಕಣ್ಣಿನ ಕೇಂದ್ರವನ್ನು ಆರಂಭಿಸಲಾಯಿತು. ಕಳೆದ ೧೮ ವರ್ಷಗಳಿಂದಲೂ ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯು ಈಗ ನಗರದಲ್ಲಿ ನೂತನ ಶಾಖೆಯನ್ನು ಆರಂಭಿಸುತ್ತಿದೆ ಎಂದು ಅವರು ಹೇಳಿದರು.
ಅಯೋಧ್ಯಾ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಕೆಇಸಿ ಶಾಖೆಯು ಕಣ್ಣಿನ ಸಾಮಾನ್ಯ ಚಿಕಿತ್ಸೆ ಸೌಲಭ್ಯದ ಜೊತೆಗೆ ವಿಶೇಷವಾಗಿ ಕಾರ್ನಿಯಾ, ಗ್ಲುಕೋಮಾ, ಪೊರೆ ಮತ್ತು ವಾರೆ ಕಣ್ಣಿನ ಶಸ್ತ್ರಚಿಕಿತ್ಸೆ, ಮಕ್ಕಳ ದೃಷ್ಟಿದೋಷ ನಿವಾರಣೆ ಮತ್ತು ರೆಟಿನಾ ಚಿಕಿತ್ಸೆ ಸೌಲಭ್ಯ ನೀಡಲಿದೆ. ಝೆಪ್ಟೋ ಕ್ಯಾಟರಾಕ್ಟ್ ಸರ್ಜರಿ ಸಂಶೋಧನೆಯ ಸೌಲಭ್ಯವನ್ನು ಅಳವಡಿಸಲಾಗುವುದು. ಇದು ಇತ್ತೀಚಿನ ಸಂಶೋಧನೆಯಾಗಿದ್ದು, ಇದರಿಂದಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಸ್ವಯಂಚಾಲಿತವಾಗಿ ಅತ್ಯುತ್ತಮವಾಗಿ ಕೈಗೊಳ್ಳಬಹುದಾಗಿದೆ. ಇದು ಕಣ್ಣಿನ ಒಳಗೆ ಲೆನ್ಸ್‌ಅನ್ನು ಅಳವಡಿಸುವ ವೇಳೆ ಹೆಚ್ಚು ಕರಾರುವಾಕ್ಕಾಗಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ಕಣ್ಣಿನ ನೋಡುವ ಸಾಮರ್ಥ್ಯ ಉತ್ತಮವಾಗುತ್ತದೆ ಎಂದು ಶಿಲ್ಪಾ ಕೋಡ್ಕಣಿ ಮಾಹಿತಿ ನೀಡಿದರು.
ಅಯೋಧ್ಯಾ ನಗರದ ಕೆಇಸಿ ಕೇಂದ್ರದಲ್ಲಿ ಕಣ್ಣಿನ ಸಾಮಾನ್ಯ ದೋಷಕ್ಕೆ ಚಿಕಿತ್ಸೆ ನೀಡುವ ಜತೆಗೆ ಆಧುನಿಕ ತಂತ್ರಜ್ಞಾನ ಆಧರಿತ ಒಣ ಕಣ್ಣಿನ ಮೌಲ್ಯಮಾಪನ ಮತ್ತು ನಿರ್ವಹಣೆ, ಮಕ್ಕಳ ಅರೆ ಮುಚ್ಚಿರುವ ಕಣ್ಣಿನ ಚಿಕಿತ್ಸೆ, ಕಣ್ಣಿನ ಪೊರೆ ಮತ್ತು ಅವಧಿ ಪೂರ್ವ ಜನಿಸಿದ ಶಿಶುವಿನ ರೆಟಿನೋಪತಿ ಬೆಳೆದಿರದೇ ಇರುವುದ(ಆರ್‌ಒಪಿ)ಕ್ಕೆ ಚಿಕಿತ್ಸೆ, ಅಸ್ಪಷ್ಟ ದೃಷ್ಟಿಯಿಂದ ಬಳಲುತ್ತಿರುವವರಿಗೆ ಇತರ ಯಾವುದೇ ಚಿಕಿತ್ಸಾ ಸೌಲಭ್ಯದಿಂದ ಸಾಧ್ಯವಾಗದೇ ಇರುವ ಮಟ್ಟಿಗಿನ ದೃಷ್ಟಿ ಸ್ಪಷ್ಟತೆಗಾಗಿ ವಿಶೇಷ ವಿಧವಾದ ಲೆನ್ಸ್, ಕನ್ನಡಕ ಪೂರೈಕೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ಸರಕಾರದ ಮನುಷ್ಯನ ದೇಹದ ಭಾಗಗಳ ಕಸಿ ಕಾಯ್ದೆ(ಹೊಟಾ) ಅಡಿ ಇತ್ತೀಚೆಗೆ ಕೆಇಸಿಗೆ ಕೆರಾಟೊಪ್ಲಾಸ್ಟೀಸ್(ಕಾರ್ನಿಯಾ ಕಸಿ)ಗೆ ಅನುಮತಿ ನೀಡಿದೆ. ಈ ಪರವಾನಗಿ ಪಡೆದ ಬೆಳಗಾವಿಯ ಪ್ರಥಮ ಖಾಸಗಿ ಆಸ್ಪತ್ರೆ ಕೆಇಸಿ ಆಗಿದೆ. ಇದರ ಜತೆಗೆ ಕೆಇಸಿಯು ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಮೌಲ್ಯಮಾಪನ ಮಂಡಳಿ(ಎನ್‌ಎಬಿಎಚ್) ಯಿಂದ ಮಾನ್ಯತೆ ಪಡೆದಿದೆ ಎಂದು ಡಾ. ಶಿಲ್ಪಾ ಕೋಡ್ಕಣಿ ವಿವರಿಸಿದರು.
ರಾಜೇಂದ್ರ ಬೆಳಗಾಂವಕರ, ಕೀರ್ತಿ ನೇರ್ಲೆಕರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ