Kannada NewsKarnataka NewsLatest

*ಬೆಂಗಳೂರಲ್ಲಿ ಟ್ರಾಫಿಕ್ ನರಕ*: *6 ಗಂಟೆ ರಸ್ತೆಯಲ್ಲೇ ಸಿಲುಕಿದ ಪ್ರಯಾಣಿಕರು*

ಪ್ರಗತಿವಾಹಿನಿ ಸುದ್ದಿ: ದಸರಾ ಹಬ್ಬಕ್ಕೆ ಊರು ಸೇರಬೇಕೆಂಬ ಖುಷಿಯಲ್ಲಿದ್ದ ಪ್ರಯಾಣಿಕರಿಗೆ ಬೆಂಗಳೂರಿನ ಟ್ರಾಫಿಕ್ ಜಾಮ್ ದೊಡ್ಡ ಆಘಾತ ನೀಡಿದೆ. ಗುರುವಾರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ಸುಮಾರು ಆರು ಗಂಟೆಗಳ ಕಾಲ ರಸ್ತೆಯಲ್ಲೇ ಸಿಲುಕಿಕೊಂಡರು. ಖಾಸಗಿ ಬಸ್‌ಗಳೂ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದು, ಕೆಲ ಬಸ್‌ಗಳು ಬೆಳಗಿನ ಜಾವ 3ರಿಂದ 4 ಗಂಟೆಯ ವೇಳೆಗೆ ಮಾತ್ರ ನಗರದಿಂದ ಹೊರಬರಲು ಸಾಧ್ಯವಾಯಿತು.

ದಸರಾ ರಜೆ ಆರಂಭವಾಗುತ್ತಿದ್ದಂತೆ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿತ್ತು. ಇದರ ಪರಿಣಾಮ ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ವಿಮಾನ ನಿಲ್ದಾಣದ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದವರೂ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದರ ನಡುವೆ ಜಿಟಿಜಿಟಿ ಮಳೆಯೂ ಪ್ರಯಾಣಿಕರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿತು. ವಾಹನಗಳು ಮುಂದಕ್ಕೆ ಚಲಿಸದೆ ರಸ್ತೆಯಲ್ಲೇ ನಿಂತಿದ್ದರಿಂದ ಮಕ್ಕಳು, ವೃದ್ಧರು ಸೇರಿದಂತೆ ಅನೇಕರು ತೀವ್ರ ತೊಂದರೆ ಅನುಭವಿಸಿದರು. ನಿಗದಿತ ಸಮಯಕ್ಕೆ ಊರು ತಲುಪಬೇಕಿದ್ದವರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲೇ ಕಾಲ ಕಳೆಯಬೇಕಾಯಿತು.

ಸಂಚಾರ ದಟ್ಟಣೆಯಿಂದ ಕಂಗೆಟ್ಟ ಪ್ರಯಾಣಿಕರು ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಗಳಿಗೆ ಕರೆ ಮಾಡಿ ವಾಹನ ಸಂಚಾರ ಸುಗಮಗೊಳಿಸುವಂತೆ ಮನವಿ ಮಾಡಿದರು. ದಸರಾ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದರೂ, ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ದಸರಾ ಹಬ್ಬಕ್ಕೆ ಊರು ಸೇರಬೇಕಿದ್ದ ಜನರಿಗೆ ಪ್ರಯಾಣವೇ ಸಂಕಷ್ಟವಾಗಿ ಪರಿಣಮಿಸಿದ್ದು, ಹಬ್ಬದ ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಮುಂಚಿತವಾಗಿ ಹೆಚ್ಚು ಪರಿಣಾಮಕಾರಿ ವ್ಯವಸ್ಥೆ ಕಲ್ಪಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button