ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಜನ ದಂಡ ನೀಡುತ್ತಾರೆ, ಆದರೆ ರಸ್ತೆ ನಿಯಮ ಪಾಲಿಸುವುದಿಲ್ಲ ಎಂದು ಇತ್ತೀಚೆಗಷ್ಟೆ ನಗರ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ ಹೇಳಿದ್ದನ್ನು ಕೇಳಿದ್ದೀರಿ.
ಇದೀಗ, ಬೆಳಗಾವಿ ಜನ ಕಳೆದ ಒಂದು ವರ್ಷದಲ್ಲಿ ಪೊಲೀಸರಿಗೆ ಕೊಟ್ಟಿರುವ ದಂಡ ಕೇಳಿದರೆ ಬೆಚ್ಚಿ ಬೀಳುತ್ತೀರಿ… 2018ರಲ್ಲಿ ಪೊಲೀಸರು ವಸೂಲಿ ಮಾಡಿರುವ ದಂಡ 3.13 ಕೋಟಿ ರೂ. 2017ರಲ್ಲಿ ದಂಡದ ಮೊತ್ತ 1.83 ಕೋಟಿ ರೂ. ಆಗಿತ್ತು. ಹೆಲ್ಮೆಟ್ ರಹಿತ ಚಾಲನೆ, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕಿಂಗ್ ಮೊದಲಾದವು ಸೇರಿವೆ. ಹೆಲ್ಮೆಟ್ ರಹಿತ ಚಾಲಕರಿಗೆ ವಿಧಿಸಿದ ದಂಡವೇ 1.86 ಕೋಟಿ ರೂ.
2017ರಲ್ಲಿ 970 ಕುಡಿದು ಚಾಲನೆ ಮಾಡುವ ಪ್ರಕರಣ ದಾಖಲಿಸಿದ್ದರೆ, 2018ರಲ್ಲಿ ಇದು 1,700. ನಿರಂತರವಾಗಿ ರಸ್ತೆ ನಿಯಮ ಕುರಿತು ತಿಳಿವಳಿಕೆ ನೀಡುವ ಕಾರ್ಯಕ್ರಮ ಮತ್ತು ದಂಡ ಹಾಕುತ್ತಿದ್ದರೂ ಬೆಳಗಾವಿಯಲ್ಲಿ ನಿಯಮ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.
ಕಳೆದ ವರ್ಷ ದಂಡ ಪ್ರಮಾಣ ಹೆಚ್ಚಾಗಿದೆ. ಅಪಘಾತದ ಪ್ರಮಾಣ ಕಡಿಮೆಯಾಗಿದೆ. ಶಾಲೆ, ಕಾಲೇಜು ಸೇರಿದಂತೆ ಎಲ್ಲೆಡೆ ರಸ್ತೆ ನಿಯಮದ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ
-ಮಹಾನಿಂಗ ನಂದಗಾವಿ, ಡಿಸಿಪಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ