Latest

ಮಠಗಳು ಸಮಾಜದ ಆರೋಗ್ಯ ಸುಧಾರಣೆಗೆ ಮುಂದಾಗಲಿ ; ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ, ಮಾಂಜರಿ

ಆರೋಗ್ಯ ಪೂರ್ಣ ಶರೀರದಲ್ಲಿ ಮಾತ್ರ ಆರೋಗ್ಯ ಪೂರ್ಣ ಮನಸು ಇರಲು ಸಾಧ್ಯ. ಸ್ವಸ್ಥ ಮನಸು ಹಾಗೂ ಶರೀರ ಸದಾಕಾಲ ಕ್ರಿಯಾಶೀಲವಾದಾಗ ಅವುಗಳಿಂದ ಏನೆಲ್ಲ ಸಾಧಿಸಬಹುದು. ಸಮಾಜದ ದಾನದಿಂದ ಸಂಪನ್ಮೂಲಗೊಂಡ ಮಠಗಳು ಸಮಾಜದ ಆರೋಗ್ಯವನ್ನು ಸರಿಪಡಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಹಿರೇಮಠ ಶಹಾಪುರ ಸೂರಗೂರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಚಿಕ್ಕೋಡಿ ತಾಲೂಕು ಯಡೂರ ಗ್ರಾಮದ ವೀರಭದ್ರ ದೇವಸ್ಥಾನದ ವಿಶಾಳಿ ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಪಿಡಿಯಾಟ್ರಿಕ್ ಸರ್ಜರಿ ಸೆಂಟರ್ ಸಾಂಗಲಿ, ಸೇವಾಸದನ ಲೈಫ್ ಲೈನ್ ಆಸ್ಪತ್ರೆ ಮಿರಜ, ಸಿದ್ದಗೇರಿ ಆಸ್ಪತ್ರೆ ಕಣೇರಿ, ಪಾಯ್ಸ ಆಸ್ಪತ್ರೆ ಜಯಶಿಂಗಪೂರ, ಕ್ಯಾನ್ಸರ ಸೆಂಟರ್ ಕೊಲ್ಲಾಪುರ ಹಾಗೂ ಜನನಿ ಆಸ್ಪತ್ರೆ ವಿಜಯಪುರ ಇವರ  ಸಂಯು ಕ್ತಾಶ್ರಯದಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಯೋಗ್ಯ ಸೇವೆ,  ಸಲಹೆ ಮತ್ತು ಮಾರ್ಗದರ್ಶನ ದೊರಕದ ಕಾರಣ ಅಮೂಲ್ಯ ಜೀವನ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಾಮಾಜಿಕ ಸಂಸ್ಥೆಗಳು, ಮಠಮಾನ್ಯಗಳು ಜಾತ್ರೆಯ ಸಂಧರ್ಭದಲ್ಲಿ ಉಚಿತ ಆರೋಗ್ಯ ಸೇವೆಯನ್ನು ನೀಡುವುದರಿಂದ ಬಡ ಜನತೆಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಎಸ್. ಗಡೇದ ನೇತೃತ್ವದಲ್ಲಿ ವಿವಿಧ ಆಸ್ಪತ್ರೆಗಳ ವೈದ್ಯರಿಂದ ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಯಿತು. ಡಾ. ಎಸ್.ಕೆ. ಪಾಟೀಲ, ಚಿದಾನಂದ ಪಾಟೀಲ, ಡಾ. ರೇಖಾ ಗೌರಾಜ ಹಾಗೂ ಇನ್ನಿತರ ವೈದ್ಯರು ಪಾಲ್ಗೊಂಡಿದ್ದರು.

ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಗೌರಿಶಂಕರ ಶಿವಾಚಾರ್ಯ ಸ್ವಾಮಿಜಿ ಜಮಖಂಡಿ, ಧೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಜಿತರಾವ ದೇಸಾಯಿ, ವಿಶಾಳಿ ಯಾತ್ರಾ ಕಮಿಟಿಯ ಅಧ್ಯಕ್ಷ ಶ್ರಿಕಾಂತ ಉಮರಾಣೆ, ಮಲ್ಲಯ್ಯಾ ಶಾಸ್ತ್ರೀ ಜಡೆ, ಅಡವಯ್ಯ ಅರಳಿಕಟ್ಟಿಮಠ, ಡಾ. ಪ್ರಭಾಕರ ಕೋರೆ ಕ್ರೇಡಿಟ್ ಸೌಹಾರ್ದ ಸಂಸ್ಥೆಯ ನಿರ್ದೇಶಕ ಸಿದಗೌಡಾ ಮಗದುಮ್ಮ, ನರಸಗೌಡ ಪಾಟೀಲ, ನರಸಗೌಡ ಕಮತೆ, ಶಿವಾನಂದ ಹಕಾರೆ, ಡಾ. ಸುಕುಮಾರ ಚೌಗಲೆ, ಸಚಿನ ಪಾಟೀಲ, ರಾಜು ಪಾಟೀಲ, ರಾಜು ಹಕಾರೆ ಮುಂತಾದವರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button