Latest

ಯುಪಿಎಸ್‌ಸಿ ಪರೀಕ್ಷೆ ತಯಾರಿಗೆ ಇಂಗ್ಲಿಷ್ ಭಾಷೆ ಅಗತ್ಯ : ನಿಖಿಲ್ ನಿಪ್ಪಾಣಿಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭಾರತೀಯ ಆಡಳಿತ ಸೇವೆ ಹಾಗೂ ಭಾರತೀಯ ಪೋಲಿಸ್ ಸೇವೆ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಸರಿಯಾಗಿ ತಯಾರಿ ನಡೆಸಬೇಕು. ಸಮಯವನ್ನು ವ್ಯರ್ಥ ಮಾಡಬಾರದು ಎಂದು ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ೫೬೩ ನೇ ರ್‍ಯಾಂಕ್ ಪಡೆದ ಬೆಳಗಾವಿಯ ನಿಖಿಲ್ ನಿಪ್ಪಾಣಿಕರ ನುಡಿದರು.
ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಹೇಗೆ ತಯಾರಿ ನಡೆಸಬೇಕೆಂಬ ಕಾರ್ಯಾಗಾರದಲ್ಲಿ ಮಾತನಾಡಿದರು.
ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಬದ್ಧತೆ, ನಿಖರತೆ, ಸ್ಥಿರತೆ ಇರಬೇಕು. ಆಗ ಮಾತ್ರ ಪರೀಕ್ಷೆಯಲ್ಲಿ ಸಫಲರಾಗಬಹುದು. ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ತಯಾರಿ ನಡೆಸುವವರು ೬ನೇ ತರಗತಿಯಿಂದ ೧೦ನೇ ತರಗತಿಯ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು ಎಂದು ಅವರು ತಿಳಿಸಿದರು.
ಪರೀಕ್ಷೆಗಾಗಿ ವಿದ್ಯಾರ್ಥಿಗಳು ಕೆಲವು ಕಠಿಣ ನಿರ್ಧಾರ ತಳೆಯಬೇಕು. ಆಧುನಿಕ ತಂತ್ರಜ್ಞಾನವನ್ನು ಸರಿಯಾಗಿ ಬಳಸಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯಬಾರದು. ಯುಪಿಎಸ್‌ಸಿ ಪರೀಕ್ಷೆಗಳನ್ನು ತಯಾರಿ ನಡೆಸುವವರಿಗೆ ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚಾಗಿ ಅಧ್ಯಯನ ಸಾಮಗ್ರಿಗಳು ದೊರೆಯುವುದರಿಂದ ಇಂಗ್ಲೀಷ ಭಾಷೆಯನ್ನು ವಿದ್ಯಾರ್ಥಿಗಳು ಕಲಿಯಬೇಕು ಎಂದು ನಿಖಿಲ್ ನಿಪ್ಪಾಣಿಕರ ಮಾರ್ಗದರ್ಶನ ನೀಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬಿಎ ಮತ್ತು ಬಿಕಾಂ ವಿಭಾಗದ ನೂರು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕೆಎಲ್‌ಇ ಸಂಸ್ಥೆಯ ಪ್ಲೇಸಮೆಂಟ್ ಆಫೀಸರ್ ಸಮೀರ ಮಜಲಿ ಸ್ವಾಗತಿಸಿ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸಿದ್ದನಗೌಡ ಪಾಟೀಲ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button