Latest

ಲಂಡನ್ ನಲ್ಲಿ ನೀರವ್ ಮೋದಿ ಪತ್ತೆ ಹಚ್ಚಿದ ಟೆಲಿಗ್ರಾಫ್ ಪತ್ರಿಕೆ

ಲಂಡನ್ : ಭಾರತದಿಂದ ಪರಾರಿಯಾಗಿ ತಲೆಮರೆಸಿಕೊಂಡಿರುವ ಡೈಮಂಡ್ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿರುವುದನ್ನು ಟೆಲಿಗ್ರಾಫ್ ಪತ್ರಿಕೆ ಪತ್ತೆ ಮಾಡಿದೆ.

ಬಹುಕೋಟಿ  ಬಂಗಲೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಮೋದಿ, ಟೆಲಿಗ್ರಾಫ್ ಕೇಳಿದ ಎಲ್ಲ ಪ್ರಶ್ನೆಗಳಿಗೂ ನೋ ಕಾಮೆಂಟ್ಸ್ ಎಂದು ಉತ್ತರಿಸಿದ್ದಾನೆ.

ಭಾರತದ ಬ್ಯಾಂಕ್ ಗಳಿಗೆ 13 ಸಾವಿರ ಕೋಟಿ ರುಪಾಯಿಯಷ್ಟು ವಂಚನೆ ಮಾಡಿ ಪರಾರಿಯಾಗಿರುವ ಆತ ಅಲ್ಲಿ ಮತ್ತೊಂದು ಡೈಮಂಡ್ ವ್ಯಾಪಾರ ಶುರು ಮಾಡಿದ್ದಾನೆ.  ಪಿಂಕ್ ಅಂಗಿ ತೊಟ್ಟು, ಕಪ್ಪು ಜಾಕೆಟ್ ಧರಿಸಿ, ಗಡ್ಡ ಬಿಟ್ಟು ಆತ ಲಂಡನ್ ನ ಬೀದಿಯಲ್ಲಿ ನಡೆದುಹೋಗುತ್ತಿದ್ದಾಗ ದಿ ಟೆಲಿಗ್ರಾಫ್ ಪತ್ರಿಕೆಯ ವರದಿಗಾರನಿಗೆ ಸಿಕ್ಕಿಬಿದ್ದಿದ್ದಾನೆ. ಟೆಲಿಗ್ರಾಫ್ ಪ್ರತಿನಿಧಿ ಪ್ರಶ್ನೆ ಕೇಳುತ್ತಿದ್ದಂತೆ ಓಡಲು ಶುರು ಮಾಡಿದ ನೀರವ್ ನನ್ನು ಬೆನ್ನತ್ತಿ ಪ್ರಶ್ನಿಸಿದರೂ ಯಾವುದಕ್ಕೂ ಉತ್ತರಿಸಲಿಲ್ಲ.

ಭಾರತದಲ್ಲಿ ಅವ್ಯವಹಾರ ನಡೆಸಿ ದೇಶಭ್ರಷ್ಟನಾಗಿದ್ದರೂ, ಲಂಡನ್ ನಲ್ಲಿ ಆತ  ಮತ್ತೆ ವಜ್ರದ ವ್ಯಾಪಾರಕ್ಕೆ ಕೈ ಹಾಕಿದ್ದಾನೆ. ಮಹಾರಾಷ್ಟ್ರದ ರಾಯಗಢದಲ್ಲಿ 100 ಕೋಟಿ ರುಪಾಯಿ ಬೆಲೆಬಾಳುವ ಆತನ ಮನೆಯನ್ನು ನೆಲಸಮಗೊಳಿಸಲಾಗಿದೆ.

Home add -Advt

ನಿಮ್ಮನ್ನು ಗಡಿಪಾರಿಗೆ ಭಾರತ ಅರ್ಜಿ ಹಾಕಿದೆ, ನೀವು ಜನರ ಹಣವನ್ನು ಲೂಟಿ ಮಾಡಿದ್ದೀರಿ, ನಿಮ್ಮನ್ನು ಜನ ಕೇಳುತ್ತಿದ್ದಾರೆ, ನಿಮ್ಮ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಿದೆ, ನೀವು ರಾಜಕೀಯ ಆಶ್ರಯ ನೀಡಬೇಕೆಂದು ಅರ್ಜಿ ಹಾಕಿದ್ದೀರಿ, ನೀವು ಲಂಡನ್ನಿನಲ್ಲಿ ಎಲ್ಲಿ ವಾಸಿಸುತ್ತಿದ್ದೀರಿ, ಇನ್ನೆಷ್ಟು ದಿನ ವಾಸಿಸುತ್ತೀರಿ, ನೀವಿನ್ನೂ ಡೈಮಂಡ್ ವ್ಯಾಪಾರ ಮಾಡುತ್ತಿದ್ದೀರಾ…. ಮುಂತಾದ ಪ್ರಶ್ನೆಗಳಿಗೆ ಮೀಸೆಯನ್ನು ಹುರಿ ಮಾಡಿಕೊಂಡಿರುವ 48 ವರ್ಷದ ನೀರವ್ ಮೋದಿಯದು ನೋ ಕಾಮೆಂಟ್ಸ್.

ದಿ ಟೆಲಿಗ್ರಾಫ್ ಪತ್ರಿಕೆ ಆತನ ಬೆನ್ನತ್ತಿದ್ದು, ಸೆಂಟರ್ ಪಾಯಿಂಟ್ ಆಫ್ ಟಾಟೆನ್‌ಹ್ಯಾಮ್ ಕೋರ್ಟ್ ರೋಡ್ ಎಂಬಲ್ಲಿ 8 ಮಿಲಿಯನ್ ಪೌಂಡ್ ಬೆಲೆಬಾಳುವ ಅಪಾರ್ಟ್ಮೆಂಟ್ ನಲ್ಲಿ ಐಷಾರಾಮಿ ಜೀವನ ಕಳೆಯುತ್ತಿದ್ದಾನೆ ಎನ್ನುವುದನ್ನು ಪತ್ತೆ ಹಚ್ಚಿದೆ.

ಅಲ್ಲಿ ಪ್ರತಿ ತಿಂಗಳ ಮನೆ ಬಾಡಿಗೆಯೇ 17 ಸಾವಿರ ಪೌಂಡ್ಸ್. ಆತ ತನ್ನ ಅಪಾರ್ಟ್ಮೆಂಟಿನಿಂದ ಕೂಗಳತೆ ದೂರದಲ್ಲಿ ಹೊರ ವಜ್ರದ ವ್ಯಾಪಾರ ಆರಂಭಿಸಿದ್ದಾನೆ ಎಂದು ಪತ್ರಿಕೆ ಹೇಳಿದೆ. ಆದರೆ, ವಜ್ರದ ವ್ಯಾಪಾರ ನಡೆಸುತ್ತಿದ್ದರ ಬಗ್ಗೆ ನೋ ಕಾಮೆಂಟ್ಸ್ ಅಂತ ಮಾತ್ರ ಹೇಳಿದ್ದ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ತನ್ನ ಕಂಪನಿಯ ಮೂಲಕ 6,498 ಕೋಟಿ ರುಪಾಯಿ ಪಂಗನಾಮ ಹಾಕಿದ್ದಕ್ಕಾಗಿ 2018ರ ಫಬ್ರವರಿಯಲ್ಲಿಯೇ ಆತನ ವಿರುದ್ಧ ದೂರು ದಾಖಲಿಸಲಾಗಿದೆ. ಆದರೆ ಆತ ಅಷ್ಟರಲ್ಲಾಗಲೇ ಭಾರತದಿಂದ ಪರಾರಿಯಾಗಿದ್ದ. ಅದೇ ತಿಂಗಳು ಆತನ ಪಾಸ್ಪೋರ್ಟನ್ನು ಮುಟ್ಟುಗೋಲು ಮಾಡಿಕೊಳ್ಳಲಾಗಿದೆ. ನೀರವ್ ಸೋದರ ಸಂಬಂಧಿ ಮೆಹುಲ್ ಚೋಕ್ಸಿ ಕೂಡ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಮೋಸ ಮಾಡಿ ದೇಶಭ್ರಷ್ಟನಾಗಿದ್ದಾನೆ. ನೀರವ್ ನನ್ನು ಗಡಿಪಾರು ಮಾಡಬೇಕೆಂದು ಭಾರತ ಸರಕಾರ ಅರ್ಜಿ ಹಾಕಿದೆ. ಆದರೆ ಅದನ್ನು ಲಂಡನ್ ಕೋರ್ಟ್ ಗೆ ಇನ್ನೂ ಸಲ್ಲಿಸಲಾಗಿಲ್ಲ.

Related Articles

Back to top button