Latest

ವಿದ್ಯುತ್ ಇಲಾಖೆಯಲ್ಲೇ ಗ್ರಾಹಕ ನ್ಯಾಯಾಲಯ ಇರುವುದು ಗೊತ್ತೇ?

ವಿದ್ಯುತ್ ಗ್ರಾಹಕರ ಮಾಹಿತಿ

  ಬಹಳಷ್ಟು ಜನರಿಗೆ ವಿದ್ಯುತ್ ಇಲಾಖೆಯಲ್ಲೊಂದು ಗ್ರಾಹಕ ನ್ಯಾಯಾಲಯ (ವೇದಿಕೆ) ಇದೆಯೆಂದು ಗೊತ್ತಿಲ್ಲ. ಅದು ವಿದ್ಯುತ್ ಗ್ರಾಹಕರ ಕುಂದುಕೊರತೆಗಳನ್ನು ನ್ಯಾಯಾಲಯದಂತೆಯೇ ತೀರ್ಮಾನಿಸುತ್ತ ಕಾರ್ಯನಿರ್ವಹಿಸುತ್ತಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿಯಂತ್ರಣಗಳು, 2004ರ ಕಾಯ್ದೆ ಅಡಿಯಲ್ಲಿ ಇಂಥ ಗ್ರಾಹಕ ಕುಂದು ಕೊರತೆ ನಿವಾರಣಾ ವೇದಿಕೆ ಪ್ರತಿಯೊಂದು ಜಿಲ್ಲೆಯಲ್ಲಿ ಸುಪರಿಂಟೆಂಡೆಂಟ್ ಎಂಜಿನಿಯರ್ ಅವರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ನ್ಯಾಯಾಲಯದಲ್ಲಿ ಸುಪರಿಂಟೆಂಡೆಂಟ್ ಎಂಜಿನಿಯರ್ ಅವರು ಚೇರಮನ್ ಆಗಿದ್ದು, ಅವರ ಜೊತೆ ಇಬ್ಬರು ಸದಸ್ಯರು ಇರುತ್ತಾರೆ. ಅವರಲ್ಲಿ ಒಬ್ಬ ಸದಸ್ಯರು ಇಲಾಖೆಯ ನೌಕರ ಮತ್ತು ಇನ್ನೊಬ್ಬರು ಗ್ರಾಹಕ ಹಿತರಕ್ಷಣೆಯ ಕ್ಷೇತ್ರದಲ್ಲಿ ಕನಿಷ್ಠ 5ವರ್ಷ ಸೇವೆ ಸಲ್ಲಿಸಿರುವವರು. ಹೀಗೆ ಮೂವರು ಸದಸ್ಯರನ್ನೊಳಗೊಂಡ ಈ ವೇದಿಕೆ ಪ್ರತಿ ತಿಂಗಳಿನಲ್ಲಿ ಎರಡು ಬಾರಿಯಾದರೂ ಕಲಾಪ ನಡೆಸಬೇಕು.
ಗ್ರಾಹಕರು ಇಲಾಖೆಯಿಂದ ವಿದ್ಯುತ್ ವಿತರಣೆಗೆ ಸಂಬಂಧಿತ ಕುಂದುಕೊರತೆಗಳ ವಿರುದ್ಧ ನಿಗದಿತ ಫಾರ್ಮ-1ನ್ನು ತುಂಬಿ ದೂರನ್ನು ಸಲ್ಲಿಸಬೇಕು. ಈ ಫಾರ್ಮನ್ನು ಇಲಾಖೆಯು ಗ್ರಾಹಕರಿಗೆ ಉಚಿತವಾಗಿ ನೀಡುತ್ತದೆ. ಆದರೆ ಅನಧಿಕೃತ ವಿದ್ಯುತ್ ಬಳಕೆ ಅಥವಾ ಅಪರಾಧಿಕ ಸ್ವರೂಪದ ವಿದ್ಯುತ್ ಕಳ್ಳತನ ಮುಂತಾದ ಪ್ರಕರಣಗಳನ್ನು ಈ ವೇದಿಕೆ ವಿಚಾರಿಸುವಂತಿಲ್ಲ. ವಿದ್ಯುತ್ ವಿತರಣೆಗೆ ಸಂಬಂಧಿತ ದೂರನ್ನು ಸಲ್ಲಿಸಿದಾಗ ವೇದಿಕೆಯು ಅದನ್ನು ಸಂಬಂಧಿತ ಇಲಾಖೆಯ ಸಿಬ್ಬಂದಿಯ ಗಮನಕ್ಕೆ ತಂದು ಕುಂದುಕೊರತೆಯನ್ನು ಸರಿಪಡಿಸಲು ಅವಕಾಶ ನೀಡುತ್ತದೆ. ಒಂದು ವೇಳೆ ಸರಿಯಾಗದಿದ್ದಲ್ಲಿ ಅಥವಾ ಅದು ಸಾಧ್ಯವಿಲ್ಲದಿದ್ದರೆ ಸಿಬ್ಬಂದಿಯು ಅದಕ್ಕೆ ಸಂಬಂಧಿತ ದಾಖಲೆಗಳನ್ನು ವೇದಿಕೆಗೆ ಸಲ್ಲಿಸಬೇಕು. ಆಗ ವೇದಿಕೆಯು ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ಉಭಯತರರಿಗೂ ತಿಳಿಸುತ್ತದೆ. ನಿಗದಿತ ದಿನ ವಿಚಾರಣೆ ಮಾಡಿ, 60 ದಿನಗಳೊಳಗೆ ತನ್ನ ತೀರ್ಪನ್ನು ನೀಡುತ್ತದೆ. ಇಲಾಖೆಯ ಸಿಬ್ಬಂದಿಯ ಲೋಪವಾಗಿದ್ದರೆ, ಅದನ್ನು ಸರಿಪಡಿಸಲು ಅಥವಾ ಸಂಬಂಧಿತ ಸಿಬ್ಬಂದಿ/ಅಧಿಕಾರಿಗೆ ದಂಡ ವಿಧಿಸುವ ಆದೇಶ ಕೂಡ ಮಾಡಬಹುದು.
ಈ ವೇದಿಕೆಯ ಆದೇಶದ ವಿರುದ್ಧ ಬೆಂಗಳೂರಿನಲ್ಲಿಯ ಓಂಬುಡ್ಸಮನ್ ಅವರಲ್ಲಿ ಮೇಲ್ಮನವಿ ಕೂಡ ಸಲ್ಲಿಸಲು ಅವಕಾಶವಿದೆ. ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಗ್ರಾಹಕ ವೇದಿಕೆಯ ಮತ್ತು ಓಂಬುಡ್ಸಮನ್ ಕುರಿತು ವಿದ್ಯುತ್ ಬಿಲ್ಲುಗಳಲ್ಲಿ ಮುದ್ರಿಸಲಾಗಿರುತ್ತದೆ. ಜೊತೆಗೆ ಸಹಾಯವಾಣಿ ಸಂಖ್ಯೆ 1912ನ್ನು ತಿಳಿಸಲಾಗಿದೆ.
ವಿದ್ಯುತ್ ಇಲಾಖೆ ಹೆಚ್ಚು ಪಾರದರ್ಶಕ, ಸಮರ್ಪಕ ಹಾಗೂ ಉತ್ತಮ ಸೇವೆ ನೀಡುವಲ್ಲಿ ಈ ವೇದಿಕೆ ಅವಕಾಶ ಮಾಡಿಕೊಡುತ್ತದೆ.

-ಸುನೀಲ ಎಸ್. ಸಾಣಿಕೊಪ್ಪ,
(ವಿದ್ಯುತ್ ಇಲಾಖೆಯ ಗ್ರಾಹಕ ಕುಂದು ಕೊರತೆ ನಿವಾರಣಾ ವೇದಿಕೆಯ ಸದಸ್ಯರು
ದೂರವಾಣಿ-9964546763) 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button